ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಪ್ರಕರಣ, ಉಪ ಲೋಕಾಯುಕ್ತರ ಭೇಟಿ-ಪರಿಶೀಲನೆ, ಸುದ್ದಿಗಾರರಿಗೆ ಹೇಳಿದ್ದೇನು ಗೊತ್ತಾ?
ವಿಜಯಪುರ: ಗುಣಮಟ್ಟಕ್ಕೆ ಹೆಸರಾಗಿ ರಾಜ್ಯಮಟ್ಟದ ಪ್ರಶಸ್ತಿ ಕಂಡ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಈಚೆಗೆ ಘಟಿಸಿದ ಬಾಣಂತಿಯರ ನರಳಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರದಲ್ಲಿ ಸಿಜೇರಿಯನ್‌ಗೆ ಒಳಗಾದ 21ಕ್ಕೂ ಅಧಿಕ ಬಾಣಂತಿಯರ ಹೊಲಿಗೆ ಬಿಚ್ಚಿ ಕೀವು ಸೋರಿಕೆಯಾಗಿತ್ತು. ಈ ಬಗ್ಗೆ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಮಾಹಿತಿ ಕಲೆ ಹಾಕಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 21 ಪ್ರಕರಣಗಳಲ್ಲಿ ಈಗಾಗಲೇ 7 ಜನ ಗುಣಮುಖರಾಗಿದ್ದು, ಅವರನ್ನು ಬಿಡುಗಡೆಗೊಳಿಸಲಾಗಿದೆ. 10 ಜನರಿಗೆ ಮರು ಹೊಲಿಗೆ ಹಾಕಲಾಗಿದೆ. ಇನ್ನೂ ಮೂರು ಜನರಿಗೆ ಮರು ಹೊಲಿಗೆ ಹಾಕಬೇಕು. ಚಿಕಿತ್ಸೆ ಮುಂದುವರಿದಿದೆ. ದೇವರ ದಯೆಯಿಂದ ಯಾರಿಗೂ ಜೀವ ಹಾನಿ ಆಗಿಲ್ಲ ಎಂದರು.
ವೈದ್ಯರು ಹೇಳುವ ಪ್ರಕಾರ ಎರಡೇ ಆಪರೇಶನ್ ಥಿಯೇಟರ್ ಇದ್ದು 1ನ್ನು ಎಚ್‌ಐವಿ ಮತ್ತಿತರ ಸೋಂಕಿತರಿಗೆ ಮೀಸಲಿಟ್ಟಿದ್ದು ಇನ್ನೊಂದನ್ನು ಮಾತ್ರ ಬಳಸಲಾಗುತ್ತಿದೆ. ಹೀಗಾಗಿ ಪ್ರಕರಣಗಳು ಹೆಚ್ಚಿಗೆ ಬಂದಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಹೋಗಿ ಈ ಸಮಸ್ಯೆ ಎದುರಾಗಿದೆ. ಇನ್ಪೆಕ್ಷನ್ ಆಗೋದು ಸಹಜ ಎಂದಿದ್ದಾರೆ. ಆದರೆ, ಕಳೆದ ಆರು ತಿಂಗಳ ಹಿಂದೆ ಇಂತ ಪ್ರಕರಣಗಳು ಎಷ್ಟಿದ್ದವು. ಈಗಲೇ ಏಕೆ ಹೆಚ್ಚಾಯಿತು? ಪ್ರತಿ ತಿಂಗಳು ಎಷ್ಟು ಸರ್ಜರಿಯಾಗುತ್ತಿತ್ತು? ಎಷ್ಟು ಇನ್ಫೆಕ್ಸನ್ ಆಗುತ್ತಿತ್ತು? ಎಂಬ ಮಾಹಿತಿ ಕಲೆ ಹಾಕಲು ತಿಳಿಸಲಾಗುತ್ತಿದೆ. ಈ ಹಿಂದೆ 2-3 ಇದ್ದು ಪ್ರಕರಣ ಏಕಾಏಕಿ 21 ಯಾಕಾಯಿತು? ಯಾರಿಂದಾಯಿತು? ತಡೆಯಲು ಆಗಲಿಲ್ಲವೇಕೆ? ಮುಂದೆ ಆಗದ ಹಾಗೆ ಏನು ಮಾಡಬೇಕು? ಈ ಎಲ್ಲ ಮಾಹಿತಿ ಪಡೆಯಲಾಗುತ್ತಿದೆ ಎಂದು ಬಿ.ಎಸ್. ಪಾಟೀಲ ತಿಳಿಸಿದರು.
ಆಸ್ಪತ್ರೆ ಸಿಬ್ಬಂದಿ ರೋಗಿಗಳಿಂದ 2 ರಿಂದ 3 ಸಾವಿರ ರೂ.ಹಣ ಪಡೆಯುವ ಆರೋಪ ಬಂದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಲೋಕಾಯುಕ್ತರು, ಈವರೆಗೂ ಅಂಥ ದೂರು ಬಂದಿಲ್ಲ. ಯಾರು ದುಡ್ಡು ಕೇಳಿದ್ದಾರೆ ಅಂಥವರ ಬಗ್ಗೆ ದೂರು ಕೊಡಿ. ಹಣ ಪಡೆಯುವುದು ಅಕ್ಷಮ್ಯ ಅಪರಾಧ. ಹಾಗೇನಾದರೂ ಇದ್ದರೆ ಗಮನಕ್ಕೆ ತೆಗೆದುಕೊಂಡು ಬನ್ನಿ. ವಾಸ್ತವದಲ್ಲಿ ಉಪಚಾರ ಮಾಡಿ ಮರಳಿ ಹೋಗುವಾಗ ರೋಗಿಗೆ ದುಡ್ಡುಕೊಟ್ಟು ಕಳುಹಿಸುತ್ತಾರೆ. ಅಂಥದರಲ್ಲಿ ಯಾರಾದರೂ ರೋಗಿಗಳಿಂದ ದುಡ್ಡು ಪಡೆದರೆ ಅದು ಅಪರಾಧ ಎಂದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಎಚ್.ಡಿ. ಆನಂದಕುಮಾರ, ಎಸಿ ಬಲರಾಮ ಲಮಾಣಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಡಿಎಚ್‌ಒ ಡಾ.ರಾಜಕುಮಾರ ಯರಗಲ್ಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಲಕ್ಕಣ್ಣವರ ಇದ್ದರು.