ಗುಮ್ಮಟ ನಗರಿಯಲ್ಲಿ ಮಳೆ ಅವಾಂತರ, ಬೈಕ್ ಸವಾರನ ಮೇಲೆ ಉರುಳಿ ಬಿದ್ದ ಮರ, ವಿದ್ಯುತ್ ತಂತಿ ತಗುಲಿ ಕರು ಸಾವು
ವಿಜಯಪುರ: ಬೈಕ್ ಸವಾರನ ಮೇಲೆ ಬೃಹತ್ ಮರ ಉರುಳಿ ಗಾಯಗೊಂಡಿರುವ ಘಟನೆ ವಿಜಯಪುರದ ಜಲಮಂಡಳಿ ಬಳಿ ನಡೆದಿದೆ.
ಶುಕ್ರವಾರ ಮಧ್ಯಾಹ್ನ ಬೈಕ್ ಮೇಲೆ ಸಾಗುತ್ತಿದ್ದಾಗ ಮಳೆಯಿಂದ ನೆನೆದಿದ್ದ ಗುಲ್‌ಮೋಹರ್ ಮರ ಏಕಾಏಕಿ ಉರುಳಿ ಬಿದ್ದಿದೆ. ಕೆಎ 28, ಎನ್ 5799 ಬೈಕ್‌ನ ಚಾಲಕ ಗಾಯಗೊಂಡಿದ್ದು ಆತನ ಹೆಸರು ತಿಳಿದು ಬಂದಿಲ್ಲ.
ಘಟನೆ ನಡೆಯುತ್ತಿದ್ದಂತೆ ಸುತ್ತಲಿನ ಸಾರ್ವಜನಿಕರು ಗಾಯಾಳು ಬೈಕ್ ಸವಾರನನ್ನು ರಸ್ತೆ ಪಕ್ಕದ ಫುಟ್‌ಪಾತ್ ಮೇಲೆ ಕೂರಿಸಿ, ನೀರು ಕುಡಿಸಿ ಉಪಚರಿಸಿದರು. ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗೋಳಗುಮ್ಮಟ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಆಕಳ ಕರು ಸಾವು:
ಇನ್ನೊಂದು ಕಡೆ ವಿದ್ಯುತ್ ತಂತಿ ತಗುಲಿ ಆಕಳ ಕರು ಅಸುನೀಗಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ವಿಜಯಪುರದ ಸಕಾಫ್ ರೋಜಾ ಬಳಿ ಈ ಘಟನೆ ನಡೆದಿದ್ದು ಮೂಕ ಪ್ರಾಣಿಗಳ ಸಾವಿಗೆ ಕಾರಣರಾದ ಹೆಸ್ಕಾಂ ಅಧಿಕಾರಿಗಳ ಮೇಲೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ರಾತ್ರಿ ಸುರಿದ ಮಳೆಯಿಂದ ವಿದ್ಯುತ್ ತಂತಿ ಶಾರ್ಟ್‌ಸರ್ಕ್ಯೂಟ್ ಆಗಿದೆ. ವಿದ್ಯುತ್ ಕಂಬದ ಬಳಿ ಆಕಳ ಕರು ಹೋದಾಗ ವಿದ್ಯುತ್ ತಗುಲಿದೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.