ಹಿರೇಮಸಳಿ ಶರಣಬಸವೇಶ್ವರ ಜಾತ್ರೆ, ಜನಮನ ಸೂರೆಗೊಂಡ ಮಹಾ ರಥೋತ್ಸವ
ಇಂಡಿ: ಬೃಹತ್ ನಂದಿಕೋಲು ಮೆರವಣಿಗೆ, ಉಲ್ಲಕ್ಕಿ ಉತ್ಸವ, ಕಲಾ ಪ್ರಕಾರಗಳ ಪ್ರದರ್ಶನ, ವಾದ್ಯಗಳ ವೈಭವ, ಸುಮಂಗಲಿಯರ ಕುಂಭ ಮೆರವಣಿಗೆ, ಪಟಾಕಿಗಳ ಸದ್ದಿನೊಂದಿಗೆ ಶ್ರೀ ಶರಣ ಬಸವೇಶ್ವರ ಜಾತ್ರಾಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಶನಿವಾರ ನೆರವೇರಿದ ನೂತನ ರಥೋತ್ಸವಕ್ಕೆ ನಾಡಿನ ನಾನಾಭಾಗಗಳ ಭಕ್ತರು ಆಗಮಿಸಿದ್ದರು. ಕರೊನಾದಿಂದಾಗಿ ಮೂರು ವರ್ಷಗಳಿಂದ ಕಳೆಗುಂದಿದ ಜಾತ್ರೋತ್ಸವ ಈ ಬಾರಿ ಸಡಗರ ಹಾಗೂ ಸಂಭ್ರಮದಿಂದ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜಾತ್ರೋತ್ಸವ ನೆರವೇರಿಸಲಾಯಿತು.
ಇದೇ ಮೊದಲ ಬಾರಿ ಸಿದ್ಧಗೊಂಡ ಬೃಹತ್ ರಥೋತ್ಸವ ಜಾತ್ರೆಯ ಸಡಗರ ಹೆಚ್ಚಿಸಿತು. ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಸುಕಿನ ಜಾವದಲ್ಲಿಯೇ ಶ್ರೀ ಶರಣಬಸವೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನೆರವೇರಿತು. ಬೆಳಗ್ಗೆ 7ಕ್ಕೆ ನೂತನ ರಥಕ್ಕೆ ಹೋಮ ಹವನ ಹಾಗೂ ಧಾರ್ಮಿ ವಿಧಿ ವಿಧಾನಗಳು ನೆರವೇರಿದವು. ಮಧ್ಯಾಹ್ನ 2ಕ್ಕೆ ಶ್ರೀ ಮಲ್ಲಿಕಾರ್ಜುನ ಹಾಗೂ ರೇವಣಸಿದ್ಧೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ನಂದಿಕೋಲು ಮೆರವಣಿಗೆ ಜನಮನ ಸೂರೆಗೊಂಡಿತು.
ಸಂಜೆ 5.30ಕ್ಕೆ ಬಂಥನಾಳದ ಪೂಜ್ಯ ವೃಷಬಲಿಂಗ ಶಿವಯೋಗಿಗಳ ಅಮೃತ ಹಸ್ತದಿಂದ ಚಾಲನೆಗೊಂಡ ರಥೋತ್ಸವದಲ್ಲಿ ಸಹಸ್ರಾರು ಜನ ಪಾಲ್ಗೊಂಡಿದ್ದರು. ರಥದ ಚಕ್ರಕ್ಕೆ ಸಿಡಿಗಾಯಿ ಒಡೆದು ಭಕ್ತಿ ಸಮರ್ಪಿಸಲಾಯಿತು. ಹೂ-ಹಣ್ಣು ಎಸೆದು ಭಕ್ತರು ಹರಕೆ ತೀರಿಸಿದರು. ಸುತ್ತಲಿನ ಗ್ರಾಮಸ್ಥರು ರಥೋತ್ಸವವನ್ನು ಕಣ್ತುಂಬಿಕೊಂಡರು.
ಜಾತ್ರೆಯಲ್ಲಿ ಮೇ 22 ರಂದು:
ಶರಣಬಸವೇಶ್ವರ ಜಾತ್ರೆ ಹಿನ್ನೆಲೆ ಮೇ 22ರಂದು ಸಂಜೆ 4ಕ್ಕೆ ಜಂಗಿ ನಿಕಾಲಿ ಕುಸ್ತಿಗಳು ನೆರವೇರಲಿವೆ. ರಾತ್ರಿ 8ಕ್ಕೆ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮಗಳು ಜರುಗಲಿದೆ. ರಾತ್ರಿ 10ಕ್ಕೆ ಅಲ್ಲಾವುದ್ದೀನ್ ತಡವಲಗಾ ಇವರ ಭವ್ಯ ರಂಗಸಜ್ಜಿಕೆಯಲ್ಲಿ ‘ಬಡವ ಬದುಕಲೇ ಬೇಕು ಅರ್ಥಾತ್ ತಂಗಿ ಹೇಳಿದ ಮಾತು’ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.