ಧೂಳಖೇಡ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ, ಜಫ್ತು ಮಾಡಿದ ಅಕ್ರಮ ಹಣ ಎಷ್ಟು ಗೊತ್ತಾ?
ಸರಕಾರ್ ನ್ಯೂಸ್ ಝಳಕಿ
ರಾಜ್ಯದಲ್ಲಿಯೇ ಹೆಸರುವಾಸಿಯಾಗಿರುವ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಧೂಳಖೇಡ ಚೆಕ್ ಪೋಸ್ಟ್ ಮೇಲೆ ಶುಕ್ರವಾರ ನಸುಕಿನಲ್ಲಿಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಸುಕಿನ 4.30ರ ಸುಮಾರಿಗೆ ಲೋಕಾಯುಕ್ತ ಎಸ್‌ಪಿ ಅನಿತಾ ಹದ್ದಣ್ಣವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ 4,53,611 ರೂ.ಅಕ್ರಮ ಹಣ ಪತ್ತೆಯಾಗಿದೆ. ಮುಂದಿನ ಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ವರದಿ ಸಲ್ಲಿಸಲಾಗಿದೆ.
ದಾಳಿ ನಡೆದಿದ್ದು ಏಕೆ?
2022 ಜೂನ್ 24ರಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ವಿಜಯಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಧೂಳಖೇಡ ಚೆಕ್‌ಪೋಸ್ಟ್‌ನಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದ್ದರು. ಈ ಬಗ್ಗೆ 2022 ಜೂನ್ 30ರಂದು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಲೋಕಾಯುಕ್ತ ಎಸ್‌ಪಿಗೆ ಸೂಚಿಸಿದ್ದರು. ಆ ಪ್ರಕಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಅಕ್ರಮ ಹಣ ಹಾಗೂ ದಾಖಲೆಗಳ ಸಮೇತ ವರದಿ ನೀಡಲಾಗಿದೆ.