ನಮ್ಮ ವಿಜಯಪುರ

ರಸ್ತೆಗೆ ಹಗ್ಗ ಕಟ್ಟಿ ರಾಡ್‌ ತೋರಿಸಿ ದರೋಡೆ, ಕಳ್ಳರ ಹೆಡೆಮುರಿ ಕಟ್ಟಿದ ಖಾಕಿ ಪಡೆ, ಹೇಗಿತ್ತು ಗೊತ್ತಾ ಕಾರ್ಯಾಚರಣೆ?

ಸರಕಾರ್‌ ನ್ಯೂಸ್‌ ವಿಜಯಪುರ

ಐತಿಹಾಸಿಕ ವಿಜಯಪುರ ನಗರದಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.

ವಿಜಯಪುರದ ಶಕ್ತಿ ನಗರ ಕ್ರಾಸ್‌ ಬಳಿ ಡಿ. 10 ರಂದು ರಾತ್ರಿ ದಾರಿಹೋಕರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್‌ ಮತ್ತು ಚಾಕು ತೋರಿಸಿ ಹಣ ಹಾಗೂ ಬೆಲೆ ಬಾಳುವ ಸಾಮಗ್ರಿ ಲೂಟಿ ಮಾಡುತ್ತಿದ್ದ ಐವರ ಪೈಕಿ ಮೂವರನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ತಪ್ಪಿಸಿಕೊಂಡಿರುವ ಇನ್ನಿಬ್ಬರ ಹುಡುಕಾಟದಲ್ಲಿದ್ದಾರೆ.

ಯಾರು ಈ ಕಿರಾತಕರು?

ವಿಜಯಪುರದ ಬಬಲೇಶ್ವರ ನಾಕಾದ ಮುಜಾವರ ಗಲ್ಲಿಯ ನಿವಾಸಿ ಅಲ್ತಾಪ ಅಮೀನಸಾಬ ಮನಗೂಳಿ (21), ಸಕಾಫ್‌ ರೋಜಾದ 4 ನಂಬರ್‌ ಶಾಲೆ ಹತ್ತಿರದ ನಿವಾಸಿ ನಬಿರಸೂಲ ಊರ್ಫ್‌ ಟಾಡಾ ದಸ್ತಗೀರ ಘೋಡೆಸವಾರ (33), ಮುಜಾವರ ಗಲ್ಲಿಯ ಮಹ್ಮದ್‌ಸೈಪ್‌ ಜಾವೀದ ಸೌದಾಗರ (19) ಬಂಧಿತ ಆರೋಪಿಗಳು.
ಇವರ ಜೊತೆಗಿದ್ದ ಶಾಸ್ತ್ರಿ ನಗರದ ನಿವಾಸಿ ಸಲ್ಮಾನ ಏಜಾಜ ಖಾನ ಹಾಗೂ ಮೀನಾಕ್ಷಿ ವೃತ್ತದ ಬಳಿಯ ಬಂದೇನವಾಜ್‌ ಕಟ್ಟಾ ಬಳಿಯ ಸೊಹೇಬ ರುಕಮೋದ್ದಿನ ತಾಳಿಕೋಟಿ ತಪ್ಪಿಸಿಕೊಂಡಿದ್ದಾರೆ.

ಹೇಗಿತ್ತು ಕಾರ್ಯಾಚರಣೆ?

ಗಾಂಧಿ ಚೌಕ್‌ ಠಾಣೆ ಪಿಎಸ್ಐ ಬಿ.ಎಂ. ರಬಕವಿ ಪೆಟ್ರೊಲಿಂಗ್‌ ಕರ್ತವ್ಯದಲ್ಲಿದ್ದಾಗ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ಬಳಿ ಬರುತ್ತಿದ್ದಂತೆ ಫೋನ್‌ ಕರೆ ಬಂದಿದ್ದು, ಶಕ್ತಿ ನಗರ ಕ್ರಾಸ್‌ ಬಳಿ ಯಾರೋ 4-5ಜನ ರಸ್ತೆಗೆ ನಿಂತು ಹಗ್ಗ ಹಿಡಿದು ಹೋಗಿ ಬರುವ ವಾಹನ ಸವಾರರು ಮತ್ತು ಜನರನ್ನು ಅಡ್ಡಗಟ್ಟಿ ನಿಲ್ಲಿಸಿ ಕಬ್ಬಿಣದ ರಾಡ್‌ ತೋರಿಸಿ ಹಣ ಲೂಟಿ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಈ ಖಚಿತ ಮಾಹಿತಿ ಆಧರಿಸಿ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಪಿಎಸ್‌ಐ ರಬಕವಿ ಹಾಗೂ ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗಿಳಿದರು.

ಏಕಾಏಕಿ ಘೇರಾವ್:

ಆರಂಭದಲ್ಲಿ ಓರ್ವವ್ಯಕ್ತಿಯನ್ನು ದೂರದಿಂದ ನೋಡಿಕೊಂಡು ಬರಲು ತಿಳಿಸಿದ್ದು ಆ ವ್ಯಕ್ತಿ ಹಣ ಲೂಟಿ ಮಾಡುತ್ತಿರುವ ಬಗ್ಗೆ ಅಲ್ಲಿ ಲೂಟಿಕೋರರು ಇರುವ ಬಗ್ಗೆ ಟಾರ್ಚ್‌ ಬೆಳಕಿನ ಮೂಲಕ ಸಿಗ್ನಲ್‌ ನೀಡಿದನು. ಬಳಿಕ ಪಿಎಸ್‌ಐ ರಬಕವಿ ಮತ್ತು ಸಿಬ್ಬಂದಿ ಸುತ್ತಲೂ ಘೇರಾವ್‌ ಹಾಕಲಾಗಿ ಮೂವರು ಸಿಕ್ಕಿದ್ದು ಇಬ್ಬರು ಪರಾರಿಯಾದರು. ಪೊಲೀಸ್‌ ಸಿಬ್ಬಂದಿ ಬಿ.ಕೆ. ಗುಡಿಮನಿ ಅಲ್ತಾಫ್‌ನನ್ನು ಹಿಡಿದು ರಾಡ್‌ ಕಸಿದುಕೊಂಡರೆ ಇನ್ನೋರ್ವ ಸಿಬ್ಬಂದಿ ಎನ್‌.ಕೆ. ಮುಲ್ಲಾ ನಬಿರಸೂಲ್‌ನಿಂದ ಕಬ್ಬಿಣದ ರಾಡ್‌ ಕಸಿದುಕೊಂಡರೆ ಆರ್.ಬಿ. ಬಿರಾದಾರ ಈತ ಮಹ್ಮದ್‌ಸೈಪ್‌ನನ್ನು ಹಿಡಿದು ಹಗ್ಗ ಕಸಿದುಕೊಂಡನು. ಇನ್ನಿಬ್ಬರು ಪರಾರಿಯಾಗಿದ್ದು ಅವರ ಮಾಹಿತಿ ಕಲೆ ಹಾಕಿದರು.

ಹೀಗೆ ಲೂಟಿ ಮಾಡುತ್ತಿದ್ದ ಕಿರಾತಕರನ್ನು ಬಂಧಿಸಿ ಅವರಿಂದ ಎರಡು ಕಬ್ಬಿಣದ ರಾಡ್‌, ಒಂದು ನೂಲಿನ ಹಗ್ಗ, ಒಂದು ಚಾಕು, ಖಾರದ ಪುಡಿ ವಶಕ್ಕೆ ಪಡೆದಿದ್ದು, ಗಾಂಧಿ ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!