ನಮ್ಮ ವಿಜಯಪುರ

ತ್ಯಾಜ್ಯ ನಿರ್ವಹಣೆ ಘಟಕಗಳ ಪರಿಶೀಲನೆ, ಜಿಪಂ ಸಿಇಓ ರಾಹುಲ್ ಶಿಂಧೆ ಸೂಚನೆ ಏನು?

ಸರಕಾರ್ ನ್ಯೂಸ್ ವಿಜಯಪುರ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಸಿಂಧೆ ಅವರು ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಜಂಗಮಶೆಟ್ಟಿ ಅವರನ್ನು ಸೂಚನೆ ನೀಡಿ, ನಗರ ಪ್ರದೇಶಗಳಲ್ಲಿ ಇಲ್ಲದೇ ಇರುವಂತಹ ಈ ಸೌಲಭ್ಯಗಳನ್ನು ಗ್ರಾಮೀಣ ವ್ಯಾಪ್ತಿಗಳಲ್ಲಿಯೂ ಒದಗಿಸುವ ಉದ್ದೇಶದಿಂದ ಈ ಘಟಕವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸದರಿ ಘಟಕವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ತಿಳಿಸಿದ ಅವರು, ಈ ಘಟಕವನ್ನು ಜಿಲ್ಲೆಯಲ್ಲಿ ಮಾದರಿ ಘಟಕವನ್ನಾಗಿ ಮಾಡಲು ಕ್ರಮ ಕೈಗೊಳ್ಳುವಂತೆ  ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಬಿ ದೇವರಮನಿ ಅವರಿಗೆ ಸೂಚಿಸಿದರು.

ಈ ಘಟಕ ನಿರ್ಮಾಣದಿಂದ ಸುಮಾರು 8 ಗ್ರಾಮ ಪಂಚಾಯಿತಿಗಳ ಬಹು ಗ್ರಾಮ ಮಲ ತ್ಯಾಜ್ಯ ನಿರ್ವಹಣೆಯಾಗುತ್ತಿದ್ದು, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಕೈಗೊಳ್ಳಲಾಗುತ್ತಿದೆ. ಮನೆ ಮನೆ ಹಂತದಲ್ಲಿ ತುಂಬಿದ ಸೆಪ್ಟಿಕ್ ಟ್ಯಾಂಕ್ ಹಾಗೂ ಇಂಗು ಗುಂಡಿಗಳ ಮಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು “ಮಲ ತ್ಯಾಜ್ಯ ನಿರ್ವಾಹಣಾ ಘಟಕ”ವನ್ನು ನಿರ್ಮಾಣ ಮಾಡುವಂತೆ ರಾಜ್ಯ ಕಛೇರಿಯಿಂದ ನಿರ್ದೇಶನ ಬಂದ ಹಿನ್ನಲೆಯಲ್ಲಿ ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯಿತಿಯಲ್ಲಿ “ಮಲ ತ್ಯಾಜ್ಯ ನಿರ್ವಹಣಾ ಘಟಕ”ವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

error: Content is protected !!