ಪ್ರಯಾಣಿಕರೇ ಎಚ್ಚರ….ಆಟೋದಲ್ಲಿ ಬಂದ ಆಗಂತುಕರು ಮಾಡಿದ್ದೇನು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಆಟೋದಲ್ಲಿ ಬಂದಿದ್ದ ಮೂವರು ಆಗಂತುಕರು ಎರಡು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದು ಮಹಿಳೆಯೋರ್ವಳು ಕಂಗಾಲಾಗಿದ್ದಾರೆ !
ಇಲ್ಲಿನ ಇಬ್ರಾಹಿಂ ರೋಜಾ ಬಳಿ ನ.19ರಂದು ಇಂಥದ್ದೊಂದು ಪ್ರಕರಣ ನಡೆದಿದ್ದು, ಮಹಿಳೆಯೋರ್ವಳ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆಯಿಂದ ಕಂಗಾಲಾಗಿರುವ ದಂಪತಿ ಗಾಂಧಿ ಚೌಕ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ವಿಜಯಪುರದ ಭೈರವ ನಗರದ ನಿವಾಸಿ ಶ್ರೀದೇವಿ ಗೋಪಾಲ ಕುಲಕರ್ಣಿ ಎಂಬುವರು ನಗದು ಹಾಗೂ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಮೂಲತಃ ಚಡಚಣ ತಾಲೂಕಿನ ಜೀರಂಕಲಗಿ ಗ್ರಾಮದವರಾದ ಇವರು ನ. 17ರಂದು ಸ್ವಂತ ಊರಾದ ಜೀರಂಕಲಗಿ ಗ್ರಾಮದಲ್ಲಿ ಕಬ್ಬಿನ ಶಾಂತಿ ಮುಗಿಸಿಕೊಂಡು ವಾಪಸ್ ವಿಜಯಪುರಕ್ಕೆ ಮರಳಿದ್ದಾರೆ. ಸಂಜೆ 4.30ರ ಸುಮಾರಿಗೆ ಚಡಚಣದಿಂದ ಹೊರಟು ಸಂಜೆ 6.30ಕ್ಕೆ ವಿಜಯಪುರ ಶಿವಾಜಿ ವೃತ್ತದಲ್ಲಿ ಬಸ್‌ನಿಂದ ಇಳಿದಿದ್ದಾರೆ. ಅಲ್ಲಿಂದ ಶ್ರೀದೇವಿ ಮತ್ತು ಗೋಪಾಲ ಇಬ್ಬರೂ ಆಟೋ ಹತ್ತಿದರು. ಅಷ್ಟರಲ್ಲಿ ಮೂವರು ಹೆಣ್ಣು ಮಕ್ಕಳು ಒಂದು ಸಣ್ಣ ಮಗುವಿನೊಂದಿಗೆ ಆಟೋ ಹತ್ತಿದರು. ಗೋಪಾಲ ಆಟೋ ಚಾಲಕನ ಪಕ್ಕದಲ್ಲಿ ಕುಳಿತರೆ ಇನ್ನುಳಿದ ಮಹಿಳೆಯರು ಶ್ರೀದೇವಿ ಪಕ್ಕದಲ್ಲಿ ಒಬ್ಬರಿಗೊಬ್ಬರು ಆನಿಸಿಕೊಂಡು ಕುಳಿತರು. ಹತ್ತುವಾಗ ಗೋದಾವರಿ ಬಳಿ ಇಳಿಯುತ್ತೇವೆ ಎಂದು ಆ ಮೂವರು ಮಹಿಳೆಯರು ಹೇಳಿದ್ದರು. ಬಳಿಕ ಆಟೋದಲ್ಲಿ ಪ್ಲಾಸ್ಟಿಕ್ ಚೀಲ ಸಪ್ಪಳ ಮಾಡುತ್ತಾ ಶ್ರೀದೇವಿ ಕಡೆಗೆ ಒತ್ತಿ ಬಂದಿದ್ದಾರೆ. ಶ್ರೀದೇವಿ ಹೊಂದಾಣಿಕೆ ಮಾಡಿಕೊಂಡು ಕುಳಿತಿದ್ದು, ಇಬ್ರಾಹಿಂ ರೋಜಾ ಕ್ರಾಸ್ ಬರುತ್ತಿದ್ದಂತೆ ಆ ಮೂವರು ಮಹಿಳೆಯರು ಆಟೋ ನಿಲ್ಲಿಸಿ ಕೆಳಗಿಳಿದರು. ಗೋದಾವರಿ ಹೋಟೆಲ್ ಬಳಿ ಇಳಿಯಬೇಕಿದ್ದವರು ಇಬ್ರಾಹಿಂ ರೋಜಾ ಬಳಿ ಇಳಿಯುತ್ತಿದ್ದಂತೆ ಶ್ರೀದೇವಿ ತನ್ನ ವ್ಯಾನಿಟಿ ಬ್ಯಾಗ್ ನೋಡಿಕೊಂಡರು. ಬ್ಯಾಗ್‌ನ ಜಿಪ್ ಓಪನ್ ಆಗಿತ್ತು. ಅಷ್ಟರಲ್ಲಿ ಆ ಮೂವರು ಮಹಿಳೆಯರು ಕಣ್ಮರೆಯಾಗಿದ್ದರು.
ಚಿನ್ನಾಭರಣ-ನಗದು ಕಳವು:
ಶ್ರೀದೇವಿ ಬ್ಯಾಗ್‌ನಲ್ಲಿದ್ದ 12.5 ಗ್ರಾಂ ತೂಕದ ಬಂಗಾರದ ಲಕ್ಷ್ಮಿ ಹಾರ, 30 ಗ್ರಾಂ ತೂಕದ ಚಪಲಾರ, 30 ಗ್ರಾಂ ತೂಕದ ಒಂದು ಜೊತೆ ಕೈಯಲ್ಲಿನ ಬಂಗಾರದ ತೋಡೆ, 4000 ರೂಪಾಯಿ ನಗದು ಇರಲಿಲ್ಲ. ಕೂಡಲೇ ಕೆಳಗಿಳಿದು ಅತ್ತಿತ್ತ ನೋಡಲಾಗಿ ಆಟೋದಿಂದ ಇಳಿದಿದ್ದ ಮೂವರು ಮಹಿಳೆಯರು ಕಾಣೆಯಾಗಿದ್ದರು. ಒಟ್ಟು 72.5 ಗ್ರಾಂ ತೂಕದ ಚಿನ್ನಾಭರಣ ಹಾಗೂ ನಗದು ಸೇರಿ ಒಟ್ಟು 2. 94 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ ಹಣ ದೋಚಿಕೊಂಡು ಹೋಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗಾಂಧಿ ಚೌಕ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)