ಬೆಳಗಾವಿ

ವಿಜಯಪುರ ಟು ಬೆಂಗಳೂರು ಎಸಿ ಸ್ಲೀಪರ್‌ ಕೋಚ್‌ ಬಸ್‌ ಏಕಿಲ್ಲ? ಸದನದಲ್ಲಿ ವಿಪ ಸದಸ್ಯ ಸುನೀಲಗೌಡರಿಗೆ ಸಿಕ್ಕ ಉತ್ತರವೇನು?

ಸರಕಾರ್‌ ನ್ಯೂಸ್‌ ಬೆಳಗಾವಿ

ವಿಜಯಪುರ ಜಿಲ್ಲೆ ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಇನ್ನೊಂದೆಡೆ ಇಲ್ಲಿನ ಸಾವಿರಾರು ಉದ್ಯೋಗಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನನಿತ್ಯ ನೂರಾರು ಜನ ಬೆಂಗಳೂರಿಗೆ ಸಂಚರಿಸಲು ಹೈಟೆಕ್‌ ಬಸ್‌ ಸೌಲಭ್ಯಗಳಿಲ್ಲದೇ ತೊಂದರೆ ಅನುಭವಿಸುತ್ತಿರುವ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಸರ್ಕಾರದ ಗಮನ ಸೆಳೆದಿದ್ದಾರೆ.

ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿರುವ ಸುನೀಲಗೌಡ ಪಾಟೀಲ ವಿಜಯಪುರದಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ವಿಜಯಪುರಕ್ಕೆ ಸಂಪರ್ಕ ಸಲ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಎಸಿ ಮಲ್ಟಿ ಆಕ್ಸಲ್‌ ವೋಲ್ವೊ ಸ್ಲೀಪರ್‌ ಬಸ್ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಧ್ವನಿ ಎತ್ತಿದ್ದಾರೆ.

ಸರ್ಕಾರ ಹೇಳಿದ್ದೇನು?

ಈ ಬಗ್ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸುತ್ತಾ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಪ್ರತಿ ದಿನ 1 ನಾನ್‌ ಎಸಿ ಸ್ಲೀಪರ್‌ ಹಾಗೂ 2 ವೇಗದೂತ ಸಾರಿಗೆಗಳನ್ನು ವಿಜಯಪುರ-ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯದ ಒಂದು ಸೀಟರ್‌ ಕಂ ಸ್ಲೀಪರ್‌ ವಾಹನವು ಉಸ್ಮಾನಾಬಾದ್‌-ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದೆ. ಈ ಹಿಂದೆ ಬೆಂಗಳೂರು ಕೇಂದ್ರಿಯ ವಿಭಾಗದಿಂದ ಬೆಂಗಳೂರು-ವಿಜಯಪುರ ಮಾರ್ಗದಲ್ಲಿ ಕರೊನಾ ಎಸಿ ಸ್ಲೀಪರ್‌ ಸಾರಿಗೆಯನ್ನು ಸೆಪ್ಟೆಂಬರ್‌-2021ರಿಂದ ಜುಲೈ 2022ರವರೆಗೆ ಕಾರ್ಯಾಚರಣೆ ಮಾಡಲಾಗಿದ್ದು, ಈ ಸಾರಿಗೆಗೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತೇಜನ ದೊರೆಯದೇ ನಿರಂತರವಾಗಿ ನಷ್ಟದಲ್ಲಿ ಕಾರ್ಯಾಚರಣೆಯಾಗುತ್ತಿರುವುದರಿಂದ, ಸಂಸ್ಥೆಯ ಆರ್ಥಿಕ ಹಿತದೃಷ್ಠಿಯಿಂದ 2022 ಜು. 26 ರಿಂದ ಜಾರಿಗೆ ಬರುವಂತೆ ಸದರಿ ಸಾರಿಗೆ ರದ್ದು ಪಡಿಸಲಾಗಿದೆ. ನಿಗಮದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತ ಮುಂದಿನ ದಿನಗಳಲ್ಲಿ ಎಸಿ ಸ್ಲೀಪರ್‌ ಸಾರಿಗೆ ಪುನಾರಂಭಿಸುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!