ಬೆಳಗಾವಿ

ವಿಜಯಪುರಕ್ಕೆ ಸಿಗುವುದೇ ಪ್ರತ್ಯೇಕ ವಿವಿ ? ಬಾಗಲಕೋಟೆ ನೂತನ ವಿವಿಗೆ ಸೇರ್ಪಡೆಯಾಗಲಿದೆಯಾ? ಸದನದಲ್ಲಿ ಶಾಸಕ ದೇವಾನಂದ ಪ್ರಶ್ನೆಗೆ ಸರ್ಕಾರ ಉತ್ತರಿಸಿದ್ದು ಹೀಗೆ….

ಸರಕಾರ್‌ ನ್ಯೂಸ್‌ ಬೆಳಗಾವಿ

ಸರ್ಕಾರ ಜಿಲ್ಲೆಗೊಂದು ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದ್ದು, ಈಗಾಗಲೇ ಬಾಗಲಕೋಟೆಗೆ ನೂತನ ವಿಶ್ವ ವಿದ್ಯಾಲಯ ಪ್ರಾರಂಭಿಸಲು ಅಧಿಸೂಚನೆ ಪ್ರಕಟಿಸಿದೆ. ಅಂತೆಯೇ ಜಮಖಂಡಿಯಲ್ಲಿ ವಿವಿ ಸ್ಥಾಪನೆಯಾಗುತ್ತಿದ್ದು, ವಿಜಯಪುರಕ್ಕೂ ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ. ಆದರೆ, ಸರ್ಕಾರ ಈವರೆಗೂ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್‌ ಸದನದಲ್ಲಿ ಪ್ರಶ್ನಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಸುಮಾರು 130ಕ್ಕೂ ಅಧಿಕ ಕಾಲೇಜುಗಳ ವಿದ್ಯಾರ್ಥಿಗಳು ಮೈಗ್ರೇಶನ್‌, ವರ್ಗಾವಣೆ ಪ್ರಮಾಣ ಪತ್ರ, ಮೂಲ ಅಂಕಪಟ್ಟಿಗಳು, ಘಟಿಕೋತ್ಸವ ಪ್ರಮಾಣ ಪತ್ರ ಸೇರಿದಂತೆ ಇನ್ನಿತರೆ ದಾಖಲೆಳನ್ನು ಪಡೆಯಲು ಮತ್ತು ಶೈಕ್ಷಣಿ ದಾಖಲೆ ಸಲ್ಲಿಸಲು ವಿಜಯಪುರ ನಗರದಿಂದ ಸುಮಾರು 210 ಕಿಮೀಗಿಂತಲೂ ಅಧಿಕ ದೂರದಲ್ಲಿರುವ ಬೆಳಗಾವಿ ನಗರದ ಹೊರವಲಯದಲ್ಲಿರುವ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ತೆರಳಬೇಕಿದೆ. ಇದರಿಂದ ಸಾಕಷ್ಟು ಶ್ರಮ, ಖರ್ಚು ಹಾಗೂ ಸಮಯ ವ್ಯಯವಾಗಲಿದೆ. ಹೀಗಾಗಿ ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನೂತನ ವಿಶ್ವ ವಿದ್ಯಾಲಯ ಮಾದರಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿಯೂ ವಿಶ್ವ ವಿದ್ಯಾಲಯ ಸ್ಥಾಪಿಸಬೇಕೆಂಬ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಆಶಯ ಕುರಿತು ಸರ್ಕಾರ ಕ್ರಮ ಕೈಗೊಳ್ಳುವುದೇ? ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಿಂತ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸುಮಾರು 130ಕ್ಕೂ ಅಧಿಕ ಕಾಲೇಜ್‌ಗಳಿದ್ದು, ನೂತನ ವಿಶ್ವ ವಿದ್ಯಾಲಯ ಸ್ಥಾಪಿಸುವ ಎಲ್ಲ ಅರ್ಹತೆ ಹೊಂದಿರುವ ಕಾರಣ ವಿಜಯಪುರ ಜಿಲ್ಲೆಯಲ್ಲಿ ನೂತನ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ? ಇಲ್ಲವಾದಲ್ಲಿ ವಿಜಯಪುರದಿಂದ ಸುಮಾರು 50 ಕಿಮೀ ಅಂತರದಲ್ಲಿರುವ ಜಮಖಂಡಿಯಲ್ಲಿ ಸ್ಥಾಪಿಸಲಾಗುತ್ತಿರುವ ನೂತನ ವಿಶ್ವ ವಿದ್ಯಾಲಯದಲ್ಲಿ ಸಂಯೋಜಿಸಲು ಕ್ರಮ ಕೈಗೊಳ್ಳುವುದೇ ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದ ನಿಲುವು ಏನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್‌ನಾರಾಯಣ, ಬೆಳಗಾವಿ ಕೇಂದ್ರ ಸ್ಥಾನ ಹೊಂದಿರುವ ಮತ್ತು ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ಪ್ರದೇಶಗಳ ಮೇಲೆ ಪ್ರಾದೇಶಿಕ ಅಧಿಕಾರ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವು ಸಸಜ್ಜಿತ ಆಡಳಿತ ವ್ಯವಸ್ಥೆ ಹಾಗೂ ಸಂಪನ್ಮೂಲ ಹೊಂದಿರುವ ವಿಶ್ವ ವಿದ್ಯಾಲಯವಾಗಿದೆ.

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕೇಂದ್ರ ಸ್ಥಾನವಾಗಿರುವ ಬೆಳಗಾವಿಯಿಂದ ದೂರದಲ್ಲಿರುವ ವಿಜಯಪುರ ಜಿಲ್ಲೆ ಹಾಗೂ ತಾಲೂಕುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಾಸೆಯನ್ನು ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಸ್ನಾತಕೋತ್ತರ ಕೇಂದ್ರವು ಸಮರ್ಪಕವಾಗಿ ಈಡೇರಿಸುತ್ತಿರುವುದರಿಂದ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಅಕ್ಕಮಹಾದೇವಿ ಮಹಿಳಾ ವಿವಿ ಇರುವುದರಿಂದ ವಿಜಯಪುರ ಜಿಲ್ಲೆಗೆ ಪ್ರತ್ಯೇಕ ವಿವಿ ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ ಎಂದಿದ್ದಾರೆ.

ಮುಂದುವರಿದು ಸಾಂಪ್ರದಾಯಿಕ ವಿಶ್ವ ವಿದ್ಯಾಲಯಗಳಿಗಿಂತ ಭಿನ್ನವಾಗಿರುವ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಿಂದ ಬೇರ್ಪಟ್ಟ ನೂತನ ಬಾಗಲಕೋಟೆ ವಿಶ್ವ ವಿದ್ಯಾಲಯದ ಕೇಂದ್ರ ಸ್ಥಾನವನ್ನು ಜಮಖಂಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯ ಕಾಲೇಜುಗಳು ಮಾತ್ರ ಜಮಖಂಡಿ ವಿಶ್ವ ವಿದ್ಯಾಲಯಕ್ಕೆ ಸಂಯೋಜನೆಗೊಳ್ಳುತ್ತವೆ. ಆದುದರಿಂದ ವಿಜಯಪುರ ಜಿಲ್ಲೆಯಲ್ಲಿ ಕಾಲೇಜುಗಳನ್ನು ಜಮಖಂಡಿ ವಿಶ್ವ ವಿದ್ಯಾಲಯಕ್ಕೆ ಸಂಯೋಜಿಸುವ ಪ್ರಸ್ತಾವನೆಯೂ ಇರುವುದಿಲ್ಲ ಎಂದಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!