ರಾಜಕೀಯ ದ್ವೇಷ ಹೀಗೂ ಇರುತ್ತಾ? ಟ್ರ್ಯಾಕ್ಟರ್ ಅಡ್ಡಗಟ್ಟಿ, ರಿಕ್ಷಾ ಗುದ್ದಿಸಿ ಮಾರಕಾಸ್ತ್ರಗಳಿಂದ ಹಲ್ಲೆ….!
ಸರಕಾರ್ ನ್ಯೂಸ್ ವಿಜಯಪುರ
ಚಲಿಸುತ್ತಿದ್ದ ಕಾರ್ ಗೆ ಟ್ರ್ಯಾಕ್ಟರ್ ಅಡ್ಡಗಟ್ಟಿ, ಹಿಂದಿನಿಂದ ಆಟೋ ರಿಕ್ಷಾದಿಂದ ಗುದ್ದಿಸಿ ಕೆಣಕಿ ಜಗಳ ತೆಗೆದಿರುವ ಗುಂಪೊಂದು ಕಬ್ಬಿಣದ ರಾಡು, ಚಾಕು ಮತ್ತಿತರ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಿದ ಪ್ರಕರಣ ವಿಜಯಪುರ ತಾಲೂಕಿನ ಹಡಗಲಿಯಲ್ಲಿ ನಡೆದಿದೆ.
ಗ್ರಾಮದ ಮಹಾಂತೇಶ ಟೋಪಣ್ಣ ರಾಠೋಡ (32) ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ಒಟ್ಟು 14 ಜನ ಸೇರಿ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡಿದ್ದ ಮಹಾಂತೇಶ ಇದೀಗ ಚಿಕಿತ್ಸೆಯಿಂದ ಗುಣಮುಖರಾಗಿ ಬಂದು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರೈಪಸಿಂಗ ಜಾಧವ, ಶಿವಾಲಾಲ ರೂಪಸಿಂಗ ರಾಠೋಡ, ಮಹಾಂತೇಶ ಕಾಸು ಜಾಧವ, ಮಹಾದೇವ ರೂಪಸಿಂಗ ಜಾಧವ, ವಿಲಾಸ ಥಾವರು ರಾಠೋಡ, ಸಚಿನ ಪರಶುರಾಮ ಜಾಧವ, ಅನೀಲ ಥಾವರು ರಾಠೋಡ, ಗುಂಡು ಯಂಕು ಜಾಧವ, ಸಚಿವ ನಂದು ರಾಠೋಡ, ಪರಸು ಗುಜ್ಜು ಜಾಧವ, ನಾಮದೇವ ಉಮಲು ರಾಠೋಡ, ದಿಲಿಪ ಹಿರು ಪವಾರ, ಪ್ರಕಾಶ ಪರಶುರಾಮ ಜಾಧವ ಹಾಗೂ ಏಕನಾಥ ರೂಪಸಿಂಗ ಜಾಧವ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ:
ಹಲ್ಲೆಗೊಳಗಾಗಿರುವ ಮಹಾಂತೇಶ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಇವರ ವಿರುದ್ಧ ನಿಂತಿದ್ದ ರೂಪಸಿಂಗ ಗುಜ್ಜು ಜಾಧವ ಮತ್ತು ಶಿವಲಾಲ ರೂಪಸಿಂಗ ರಾಠೋಡ ಸ್ಪರ್ಧಿಸಿ ಸೋತಿದ್ದಾರೆ. ಆಗಿನಿಂದ ವೈಯಕ್ತಿಕವಾಗಿ ಸಿಟ್ಟಾಗಿದ್ದರಲ್ಲದೇ ಆಗಾಗ ಕೆಣಕಿ ಜಗಳ ತೆಗೆಯುತ್ತಿದ್ದರು.
ಮೊನ್ನೆ ಅಂದರೆ ನ. 15ರಂದು ಮಂಗಳವಾರ ರಾತ್ರಿ ವಿಜಯಪುರದಿಂದ ರಾತ್ರಿ 8.15ರ ಸುಮಾರಿಗೆ ಮಹಾಂತೇಶ ಕಾರನಲ್ಲಿ ಹಡಗಲಿಗೆ ಹೊರಟಿದ್ದನು. ಕಾರ್ ಹಡಗಲಿ ತಾಂಡಾ ಕ್ರಾಸ್ ದಾಟಿ ಹಡಗಲಿ ತಾಂಡಾ ನಂ.2ರ ರಸ್ತೆಗೆ ಹೊರಟಾಗ ಎರಡು ಆಟೋರಿಕ್ಷಾದಲ್ಲಿ ಹಲವು ಜನ ಕುಳಿತು ಕಾರ್ ಹಿಂಬಾಲಿಸಿದ್ದಾರೆ. ಇದರಿಂದ ಗಾಬರಿಗೊಂಡ ಮಹಾಂತೇಶ ಕಾರಿನ ವೇಗ ಹೆಚ್ಚಿಸಿದ್ದಾನೆ. ಹಡಗಲಿಯ ಸರಕಾರಿ ಶಾಲೆ ಸಮೀಪಿಸುತ್ತಿದ್ದಂತೆ ಟ್ರ್ಯಾಕ್ಟರ್ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು. ಕೂಡಲೇ ಕಾರ್ ನಿಲ್ಲಿಸಲಾಗಿ ಹಿಂದಿನಿಂದ ಬಂದ ಆಟೋ ಮಹಾಂತೇಶನ ಕಾರ್‌ಗೆ ಡಿಕ್ಕಿ ಹೊಡೆದಿದೆ. ಕೇಳಗಿಳಿದು ನೋಡುತ್ತಿದ್ದಂತೆ ಟ್ರ್ಯಾಕ್ಟರ್ ಮತ್ತು ಆಟೋದಿಂದ ಬಂದ ಆರೋಪಿಗಳೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ.
ಕೂಡಲೇ ಗ್ರಾಮದ ಕೆಲವರು ಜಗಳ ಬಿಡಿಸಿದ್ದು ಪ್ರಜ್ಞೆ ತಪ್ಪಿದ ಮಹಾಂತೇಶನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಮಹಾಂತೇಶ ಚೇತರಿಸಿಕೊಂಡಿದ್ದು ವಿಜಯಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)