ಬಿಸಿಲೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ, ವಾರಕ್ಕೊಮ್ಮೆಯಾದರೂ ನೀರು ಕೊಡಿ ಸ್ವಾಮಿ ಎಂದ ಜನರ ಆರ್ತನಾದ ಕೇಳದೇ?
ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಬೇಸಿಗೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಮತ್ತು ಶಾಸಕರು ಗಮನ ಹರಿಸದೇ ಇರುವುದು ದುರಂತದ ಸಂಗತಿ. ವಾರ ಕಳೆದರೂ ಕುಡಿಯುವ ನೀರು ಪೂರೈಕೆಯಾಗದ ಕಾರಣ ಸಹನೆ ಕಳೆದುಕೊಂಡ ಸಾರ್ವಜನಿಕರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.
ನಗರದ ಜೈ ಕರ್ನಾಟಕ ಕಾಲನಿಯ ನಿವಾಸಿಗಳು ಜಲಮಂಡಳಿಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಜಲ ಮಂಡಳಿ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ವಾರಕ್ಕೊಮ್ಮೆಯಾದರೂ ನೀರು ಬಿಡಿ ಸ್ವಾಮಿ ಎಂದು ಕಿಡಿ ಕಾರಿದರು. ಬಳಿಕ ಮನವಿ ಸಲ್ಲಿಸಿದರು.