ವಿಜಯಪುರ

ಕತಕನಹಳ್ಳಿಯ ಕಾಲಜ್ಞಾನ ಹೇಳಿಕೆ, ಕುತೂಹಲ ಹೆಚ್ಚಿಸಿದ ಕಾರ್ಣಿಕ, ರಾಜಕೀಯದ ಬಗ್ಗೆ ಶಿವಯ್ಯ ಮುತ್ಯಾ ಹೇಳಿದ್ದೇನು? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ನ್ಯೂಸ್

ವಿಜಯಪುರ: ಕಾಲಜ್ಞಾನ ಹೇಳಿಕೆಗೆ ಹೆಸರಾದ ಕತಕನಹಳ್ಳಿಯ ಗುರುಚಕ್ರವರ್ತಿ ಸದಾಶಿವ ಮಠದ ಕಾಲಜ್ಞಾನ ಹೊರಬಿದ್ದಿದ್ದು, ಈ ಬಾರಿಯ ಕಾರ್ಣಿಕ ಕುತೂಹಲದ ಜೊತೆಗೆ ಸಮಾಧಾನ ಹೆಚ್ಚಿಸಿತು.

ಸೋಮವಾರ ಮಠದ ಆವರಣದಲ್ಲಿ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಶಿವಯ್ಯ ಮುತ್ಯಾ, ಈ ಬಾರಿ ರಾಜಕೀಯ ಬಹಳ ಗೊಂದಲ ಐತಿ, ಕೈ ಕಿತ್ತಿಕೊಳ್ಳಬೇಕಂತೈತಿ, ಹಣಕ್ಕೆ ಮತ ಹಾಕಬೇಡಿ, ಗುಣಕ್ಕೆ ಮತ ಹಾಕಿ ಎಂದರು.

ಜಾತಿಗೊಂದು ಝೆಂಡಾ, ಝೆಂಡಾದೊಳಗ ಅಜೆಂಡಾ..ನಾವೇ ಏನೇ ಇದ್ದರೂ ಕಡೀಕ ಭಾರತ ಮಾತೆಯ ಪುತ್ರರು, ಭಾರತೀಯರು ಎಂದು ಹೇಳಲು ಎಲ್ಲರೂ ಕಲಿಯಿರಿ. ಭಾರತದ ದೇಶದ ಸಂಸ್ಕೃತಿಯನ್ನು ಉಳಿಸಿಕೊಂಡು ಹೊಂಟವರನ್ನು ಹೃದಯಲ್ಲಿಟ್ಟುಕೊಳ್ಳಿ ಎಂದರು.
ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇದೆ, ಇಷ್ಟೆಲ್ಲ ಜನಕ್ಕೂ ಸೌಲಭ್ಯ ಒದಗಿಸಿರುವ ಭಾರತ ಸರ್ಕಾರಕ್ಕೆ ನೀವೆಲ್ಲ ನೆನೆಸಬೇಕು. ಒಳ್ಳೆಯವರು, ಕೆಟ್ಟವರು ಯಾರು ಎಂದು ನೀವೆಲ್ಲ ಯೋಚಿಸಿ. ಕರೊನಾಗೆ ಎರಡು ಡೋಸ್ ಲಸಿಕೆ ಉಚಿತವಾಗಿ ನೀಡಲಾಗಿದೆ. ಬೇರೆ ಬೇರೆ ದೇಶಗಳಿಗೂ ಲಸಿಕೆ ನೀಡಲಾಗಿದೆ. ಅಂಥವರನ್ನ ಮರೆಯಬಾರದು ಎಂದರು.
ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು. ಆಗ ವಿಶ್ವದ ಎಲ್ಲ ದೇಶಗಳು ಭಾರತದ ಮಾತು ಕೇಳುತ್ತವೆ. ನೀತಿ, ಪದ್ಧತಿ, ಸಂಸ್ಕೃತಿ ಎಲ್ಲವೂ ಇರಲಿ, ಜಾತಿ ನಿಮ್ಮ ಮನಿ ಹೊಸ್ತಿಲ ಒಳಗ ಇರಲಿ, ಬಾಗಿಲ ದಾಟಿ ಚೌಕಟ್ಟು ಬಿಟ್ಟು ಹೊರಗ ಬಂದರ ಜಾತಿ ಬಿಡ್ರಿ…ನೀತಿ, ಪದ್ಧತಿ, ಸಂಸ್ಕೃತಿ ಪಾಲಿಸಿ ಎಂದು ಕರೆ ನೀಡಿದರು.
ಭಾರತ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಉಳಿದಿದ್ದೆ ಹೆಣ್ಣುಮಕ್ಕಳಿಂದ. ಇವೆಲ್ಲವುಗಳನ್ನು ಹೆಣ್ಣುಮಕ್ಕಳು ಬಂಗಾರದ ಆಭರಣ ಕಾಪಾಡಿದಂತೆ ಕಾಪಾಡಬೇಕು ಎಂದರು.
ಇನ್ನು ಮಳೆ ಬೆಳೆಗೆ ಸಂಬಂಧಿಸಿದಂತೆ ಭವಿಷ್ಯ ನುಡಿದ ಶಿವಯ್ಯ ಮುತ್ಯಾ, ವಾತಾವರಣದಲ್ಲಿ ಬದಲಾಗಲಿದೆ, ಬಿಸಿಲು ಹೆಚ್ಚಾಗಲಿದೆ. ಈ ಬಾರಿಯ ಮಳೆ ಭವಿಷ್ಯ ಮೂರು ಪ್ರಕಾರವಿದೆ. ಒಂದು ಪ್ರಕಾರದ ಮಳೆ ಹರಕು ಮಳೆ, ಮುರುಕು ಹಪ್ಪಳದಂತೆ. ಮತ್ತೊಂದೆಡೆ ಟೊಳ್ಳು ಟುಸ್ಸು ಎಂಬಂತೆ ಇರುತ್ತದೆ. ಮಲೆನಾಡು ಹೋಗಿ ಬೆಳವಲ ನಾಡು, ಬೆಳವಲ ನಾಡು ಹೋಗಿ ಮಲೆನಾಡು ಆಗಲಿದೆ ಎಂದರು.
ಮಳಿ…ಮಳಿ ಹ್ಯಾಂಗ ಐತಿ ಅಂದ್ರ ಹರಕ ಮಳಿ…ಮುರುಕ ಹಪ್ಪಳ….ಒಂದ ಕಡೆ ಸಖತ್ ಮಳಿ…ಈಗ ಬಿಡ್ರಿ ಮುಂದ ಕೆಲವೊಂದು ವರ್ಷಕ್ಕ ಮಳೆನಾಡು ಬೆಳವಲ ನಾಡ ಆಗ್ತೈತಿ..ಬೆಳವಲ ನಾಡು ಮಳೆನಾಡ ಆಗ್ತೈತಿ…ಎಂದರು.

error: Content is protected !!