ಅಭಿವೃದ್ಧಿ ಮಾಡಿಲ್ಲ, ಜನರ ಬಳಿ ಹೋಗಲು ಮುಖ ಇಲ್ಲ, ಇವರಿಂದ ಶಾಂತಿ ಸೌಹಾರ್ದತೆ ಹಾಳು ಎಂದು ಎಂಎಲ್‌ಸಿ ಪ್ರಕಾಶ ರಾಠೋಡ ಹೇಳಿದ್ದು ಯಾರಿಗೆ?
ವಿಜಯಪುರ: ಅಭಿವೃದ್ಧಿ ಮಾಡಿಲ್ಲ. ಅವರಿಗೆ ಜನರ ಮುಂದೆ ಹೋಗಲು ಮುಖ ಇಲ್ಲ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಧಾರ್ಮಿಕ ವಿಷಯ ಮುಂದಿಟ್ಟುಕೊಂಡು ಶಾಂತಿ, ಸೌಹಾರ್ದತೆ ಕದಡುವ ಪ್ರಯತ್ನ ನಡೆಸಿವೆ ಎಂದು ವಿಪ ಸದಸ್ಯ ಪ್ರಕಾಶ ರಾಠೋಡ ಆರೋಪಿಸಿದ್ದಾರೆ.
ದೇಶದಲ್ಲಿ ಪೆಟ್ರೋಲ್, ಡಿಸೇಲ್‌ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಬದಲಾಗಿ ಕಾಶ್ಮೀರ ಪೈಲ್ಸ್ ತೋರಿಸೋದು, ಶಾಂತಿ ಕದಡೋದು ಇವರ ಕೆಲಸ ಆಗಿದೆ. ಹಿಂದು-ಮುಸ್ಲಿಂರು ಸಾವಿರಾರು ವರ್ಷಗಳಿಂದ ಒಟ್ಟಿಗೆ ಬದುಕಿದ್ದೇವೆ. ಈ ವಾತಾವರಣ ಕೆಡಿಸಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಇದರಿಂದ ಸಮಾಜದಲ್ಲಿ ಶಾಂತಿ ಕದಡುತ್ತಿವೆ. ಕೂಡಲೇ ಈ ವಾತಾವರಣ ಸರಿಪಡಿಸಬೇಕೆಂದು ಕಾಂಗ್ರೆಸ್‌ನ ಎಲ್ಲ ಶಾಸಕರು ವಿಧಾನ ಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆಯಲ್ಲಿ ಹೋಗಿ ಮನವಿ ಸಲ್ಲಿಸಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಾಂಗ್ರೆಸ್ ಧರ್ಮ ನಿರಪೇಕ್ಷ ಪಕ್ಷ. ಜಾತ್ಯಾತೀತ ವ್ಯವಸ್ಥೆಗೆ ಧಕ್ಕೆಯಾದಾಗ ಹೋರಾಟ ಮಾಡಿದೆ. ಸೆಕ್ಯುಲರ್ ಪದ ಸಂವಿಧಾನದಲ್ಲಿ ತಂದಿದ್ದೇ ಕಾಂಗ್ರೆಸ್ ಎಂದರಲ್ಲದೇ, ಈ ಸಂವಿಧಾನ ದುರ್ಬಲ ಮಾಡುವುದು ಬಿಜೆಪಿ ಕೆಲಸ. ಸಂವಿಧಾನದ ಮೇಲೆ ಅವರಿಗೆ ನಂಬಿಕೆ ಇಲ್ಲ. ಸ್ವಾತಂತ್ರ್ಯ ದ ಮೇಲೆ ಅವರಿಗೆ ನಂಬಿಕೆಯೇ ಇಲ್ಲ. ಏಕೆಂದರೆ ಅವರು ಸ್ವಾತಂತ್ರಕ್ಕಾಗಿ ಹೋರಾಡಿಲ್ಲ ಎಂದರು.
ದೇಶದಲ್ಲಿ ಶಾಂತಿಯಾಗಬೇಕು, ಪ್ರಗತಿಯಾಗಬೇಕೆಂಬುದೇ ಕಾಂಗ್ರೆಸ್ ಧ್ಯೇಯ. ಬೆಲೆ ಏರಿಕೆ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ ಎಂದರಲ್ಲದೇ, ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತಿದೆ. ಅದೊಂದು ಬಿಜೆಪಿಯ ‘ಬಿ’ ಟೀಂ ಎಂದರು.
ಈ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಅಭಿವೃದ್ಧಿಯಲ್ಲಿ ನಂ.1 ಸ್ಥಾನದಲ್ಲಿತ್ತು. ಈಗ ದ್ವೇಷ, ಗಲಭೆ ಹರಡುವ ರಾಜ್ಯವಾಗಿದೆ. ಈ ವಾತಾವರಣದಿಂದ ದೊಡ್ಡ ದೊಡ್ಡ ಕಂಪನಿಗಳು ಹೂಡಿಕೆ ಮಾಡಲು ಕರ್ನಾಟಕಕ್ಕೆ ಬರುತ್ತಿಲ್ಲ. ನೆರೆಯ ತಮಿಳುನಾಡು ಹುಡುಕಿಕೊಂಡು ಹೋಗುತ್ತಿವೆ. ಇದೊಂದು ದುರಂತ ಎಂದರು.
ಮುಖಂಡ ಚಾಂದಸಾಬ ಗಡಗಲಾವ, ಸಾಹೇಬಗೌಡ ಬಿರಾದಾರ ಇದ್ದರು.