ಶಾಲಾ ಸಂಸತ್ತಿನಿಂದ ಮಕ್ಕಳಲ್ಲಿ ಅರಿವು ಮೂಡಿಸಿ | ಅವಜಿ
ವಿಜಯಪುರ: ಶಾಲಾ ಸಂಸತ್ತು ಚುನಾವಣೆಗಳನ್ನು ನಡೆಸುವುದರಿಂದ ಮಕ್ಕಳಿಗೆ ವಿದ್ಯಾರ್ಥಿ ದೆಶೆಯಿಂದಲೆ ದೇಶದ ಚುನಾವಣೆ ಪ್ರಕ್ರಿಯ ಬಗ್ಗೆ ಅರಿವಿ ಮೂಡಿಸಿ ಸೂಕ್ತ ಜನಪ್ರತಿನಿಧಿಯ ಆಯ್ಕೆ ಕುರಿತು ಅರಿವು ಮೂಡಿಸಬಹುದು ಎಂದು ಸಿ.ಇ.ಎನ್ ಪೊಲೀಸ್ ಠಾಣೆಯ ಸಿ.ಪಿ.ಐ ರಮೇಶ ಅವಜಿ ಹೇಳಿದ್ದಾರೆ. ಚುನಾವಣೆಯಲ್ಲಿ ಜಯ ಗಳಿಸುವುದು ಕೇವಲ ಅಧಿಕಾರಕ್ಕಾಗಿ ಅಲ್ಲ. ಅದೊಂದು ಜವಾಬ್ದಾರಿ. ನಾವು ಅದನ್ನು ನಿಷ್ಟೆಯಿಂದ ನಿರ್ವಹಿಸಬೇಕು ಎಂದು ಅವರು ನೂತನ ವಿದ್ಯಾರ್ಥಿ ಸಂಸದರಿಗೆ ಕಿವಿಮಾತು ಹೇಳಿದರು. ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೋಟ್ನಾಳ ಮಾತನಾಡಿ, ಜೀವನದಲ್ಲಿ ನಾವು ಕಾಣುವ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ಅವುಗಳಿಗೆ ಪೂರಕವಾಗಿ ಶ್ರಮವಹಿಸಿ ಕಷ್ಟಪಡಬೇಕು. ಸರಿಯಾದ ಮಾರ್ಗದರ್ಶನದಲ್ಲಿ ಮುನ್ನಡೆದು ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಕೆ. ಆರ್. ನಾಯರ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಶ್ರೀ ಬಿ. ಎಂ. ಪಾಟೀಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನವೀನ ಜೋಯಿಡೆ ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಜೈನಾಬ್ ಸ್ವಾಗತಿಸಿದರು. ಸೈರಾ ಶೇಕ್ ವಂದಿಸಿದರು. ಕವಿತಾ ಪಾಟೀಲ ನಿರೂಪಿಸಿದರು.