ಇಪ್ಪತ್ತೊಂದು ವರ್ಷದ ಬಳಿಕ ಆರೋಪಿ ಪತ್ತೆ, ಈತನ ಗುರುತು ಸಿಕ್ಕಿದ್ದಾದರೂ ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕೇಸ್!
ಸರಕಾರ ನ್ಯೂಸ್ ವಿಜಯಪುರ
ಒಂದಲ್ಲ…ಎರಡಲ್ಲ ಬರೋಬ್ಬರಿ 21 ವರ್ಷಗಳ ಹಿಂದಿನ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ !
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದ ನಿವಾಸಿ ರಾಜು ಊರ್ಫ್ ಬಸವರಾಜು ಸುರೇಂದ್ರನಾಯ್ಕ್ ಬಂಧಿತ ಆರೋಪಿ. ಈತನ ಮೇಲೆ 2001 ಮೇ 14ರಂದು ವಿಜಯಪುರ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2003ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 3ನೇ ಆರೋಪಿಯಾಗಿದ್ದ ಈತನ ಮೇಲೆ ಶಿಕ್ಷೆ ಆಗಿತ್ತು. ಆದರೆ, ಈತ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದನು. ಆ ಉಚ್ಚ ನ್ಯಾಯಾಲಯ ಕೂಡ ಕೆಳ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿತ್ತು. ಬಳಿಕ ಅಷ್ಟಕ್ಕೆ ಸುಮ್ಮನಾಗದ ರಾಜು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಲಾಗಿ ಆ ನ್ಯಾಯಾಲಯ ಕೂಡ ಕೆಳ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿತ್ತು. ಅಲ್ಲದೇ, ಆರೋಪಿ ರಾಜು ಬಂಧನಕ್ಕೆ ವಾರೆಂಟ್ ಸಹ ಜಾರಿ ಮಾಡಿತ್ತು.
ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದನು. ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ಸಂಪರ್ಕ ಕಳೆದುಕೊಂಡಿದ್ದನು. ಹೀಗಾಗಿ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಇದೀಗ ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪದ ರಾಮನಾಳ ಎಂಬ ಗ್ರಾಮದ ಜಮೀನೊಂದರಲ್ಲಿ ಹೆಸರು ಬದಲಿಸಿಕೊಂಡು ಕೆಲಸ ಮಾಡಿಕೊಂಡಿರುವ ಮಾಹಿತಿ ಮೇರೆಗೆ ಪೊಲೀಸರ ತಂಡ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)