ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಯತ್ನಾಳ ಸಲಹೆ, ರಾಜೀನಾಮೆ ವಿಚಾರ ಕುರಿತು ಹೇಳಿದ್ದೇನು?
ಸರಕಾರ ನ್ಯೂಸ್ ವಿಜಯಪುರ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ನೀಡಿ ರಾಜಕೀಯದಲ್ಲಿ ಸ್ವಚ್ಛವಾಗಿರಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ಶನಿವಾರ ಮಳೆ ಹಾನಿ ಪರಿಶೀಲನೆ ವೇಳೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಕಳ್ಳರು-ಇವರು ಕಳ್ಳರು, ಅವರು ತಿನ್ನುತ್ತಾರೆ-ಇವರು ತಿನ್ನುತ್ತಾರೆಂದು ನಾವೂ ತಿನ್ನೋದು ಬೇಡ. ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರಾ? ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರಾ? ಎಂದು ಪ್ರಶ್ನಿಸುವ ಬದಲು ರಾಜಕೀಯವಾಗಿ ಸ್ವಚ್ಛವಾಗಿರಲು ರಾಜೀನಾಮೆ ನೀಡಿ ಎಂದರು.
ಈ ಹಿಂದೆ ಬೊಫೋರ್ಸ್ ವಿಚಾರದಲ್ಲಿ ಎಲ್.ಕೆ. ಅಡ್ವಾನಿಯವರ ಹೆಸರು ಕೇಳಿ ಬಂದಿತ್ತು. ಕೇವಲ 50 ಲಕ್ಷ ರೂಪಾಯಿ ಆರೋಪ ಇತ್ತು. ಎಲ್‌ಕೆಎ ಎಂದು ಜೈನ್ ಡೈರಿಯಲ್ಲಿ ಬರೆಯಲಾಗಿತ್ತು. ಆ ಕಾರಣಕ್ಕಾಗಿ ಅಡ್ವಾನಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆರೋಪದಿಂದ ಮುಕ್ತವಾಗುವವರೆಗೆ ಸಂಸತ್ ಪ್ರವೇಶ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದರು. ಅದು ಆದರ್ಶ. ಸಿದ್ದರಾಮಯ್ಯ ಸಹ ರಾಜೀನಾಮೆ ನೀಡುವ ಮೂಲಕ ರಾಜ್ಯಕ್ಕೆ ಹೊಸ ಆದರ್ಶವಾಗಬೇಕು. ಇಲ್ಲವಾದರೆ ಅವರು ಸಹ ಯಡಿಯೂರಪ್ಪ ಥರ ಆಗುತ್ತಾರೆ ಎಂದರು.
ತನಿಖೆ ಎದುರಿಸುತ್ತಿದ್ದರೂ ಸಿದ್ದರಾಮಯ್ಯ ಸಿಎಂ ಆಗಿರೋದು ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಅಧಿಕಾರಿಗಳಿಗೆ ಅವರ ಮೇಲೆ ಪಾರದರ್ಶಕವಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಲಾಗಲ್ಲ. ಅಧಿಕಾರಿಗಳು ಅವರ ವಿರುದ್ಧ ರಿಪೋರ್ಟ್ ಕೊಟ್ಟರೆ ವರ್ಗಾವಣೆ ಇಲ್ಲವೇ ಅಮಾನತ್ತಾಗುತ್ತಾರೆ. ಈ ಭಯದಲ್ಲಿ ಸರಿಯಾಗಿ ತನಿಖೆ ಮಾಡಲಾಗಲ್ಲ. ಸಿಎಂ ರಾಜೀನಾಮೆ ನೀಡಿದರೆ ನಿಷ್ಪಕ್ಷಪಾತವಾದ ತನಿಖೆ ಮಾಡಬಹುದು ಎಂದರು.
ಇನ್ನು ಚುನಾವಣೆ ಬಾಂಡ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಏಕೆ ರಾಜೀನಾಮೆ ನೀಡಿಲ್ಲ ಎಂಬ ಕಾಂಗ್ರೆಸ್‌ನವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಎಲ್ಲ ಪಕ್ಷಗಳೂ ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡಿವೆ. ಚುನಾವಣಾ ಬಾಂಡ್‌ಗಳನ್ನು ಕಾಂಗ್ರೆಸ್ ತೆಗೆದುಕೊಂಡಿದೆ. ಲಾಲು ಪ್ರಸಾದ್ ಯಾದವ, ಅಖಿಲೇಶ್ ಯಾದವ್ ತೆಗೆದುಕೊಂಡಿದ್ದಾರೆ. ಹಾಗಾದ್ರೆ ರಾಹುಲ್ ಗಾಂಧಿ ರಾಜೀನಾಮೆ ಕೊಡುತ್ತಾರಾ? ಎಂದರು.
ಚುನಾವಣಾ ಬಾಂಡ್ ಯಾರೂ ತೆಗೆದುಕೊಳ್ಳಬಾರದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈಗ ಬಾಂಡ್ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿಗೆ ಹೆಚ್ಚು ಹಣ ಕೊಟ್ಟಿರುವ ಕಾರಣ ಅವರಿಗೆ ತಾಪವಾಗಿದೆ ಎಂದರು.