ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಗೆ ಸಿಎಂ ಬೊಮ್ಮಾಯಿ ಶಂಕು ಸ್ಥಾಪನೆ, ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ…!
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ರ ಅನುಷ್ಟಾನಕ್ಕೆ ಬದ್ದ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ಹಂತ -1 ರ ಪೈಪ್ ವಿತರಣೆ ಜಾಲದ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಯುಕೆಪಿ ಹಂತ 3 ಪೂರ್ಣಗೊಳಿಸಲು
ಕಾಲ ಕೂಡಿ ಬಂದಿದೆ. ಅದಕ್ಕಾಗಿ ಕಾನೂನಾತ್ಮಕ ಹೋರಾಟ ನಡೆದಿದೆ. ಇನ್ನೆರೆಡು ಅಥವಾ ಮೂರು ತಿಂಗಳಲ್ಲಿ ಆದೇಶ ಬರಲಿದೆ. 130 ಟಿಎಂಸಿ ನೀರು ಸಿಗಲಿದೆ. ಆಲಮಟ್ಟಿ ಅಣೆಕಟ್ಟು ಎತ್ತರವಾಗಲಿದೆ.
ಸುಮಾರು ಐವತ್ತು ಸಾವಿರಕೋಟಿ ರೂ.ಹಣ ಬೇಕಿದೆ. ಆದೇಶ ಬಂದ ತಕ್ಷಣ ಎಷ್ಟು ಹಣ ಬೇಕೋ ಅಷ್ಟು ಹಣ ಒದಗಿಸುವುದಾಗಿ ತಿಳಿಸಿದರು.
ಹಿಂದೆ ಇದೇ ಯೋಜನೆ ಮಾಡುವಾಗ ವಿರೋಧ ಪಕ್ಷದ ನಾಯಕರೊಬ್ಬರು “ನೋಡಿ ಬೊಮ್ಮಾಯಿ ಬಹಳ ರಿಸ್ಕ್ ತೆಗೆದುಕೊಳ್ಳುತ್ತಿದ್ದೀರಿ…ಎಸ್.ಎಮ್. ಕೃಷ್ಣ ಇದ್ದಾಗ ಕೋರ್ಟ್ ಗೆ ಹೋಗಿ ಕ್ಷಮೆ ಕೇಳಿದ್ದರು” ಎಂದರು. ಆದರೆ ನಾನೆಂದೆ “ಇದು ರಾಜ್ಯದ ರೈತರ ವಿಷಯ. ನಾನು ಕ್ಷಮೆ ಅಲ್ಲ ಗಲ್ಲಿಗೇರಿಸಿದರೂ ಅದಕ್ಕೆ ಸಿದ್ದ'” ಎಂದೆ.
ಹೀಗಾಗಿ ಯುಕೆಪಿ ನೀರಾವರಿಗೆ ಎಷ್ಟೇ ಹಣ ಖರ್ಚಾದರೂ ಅದಕ್ಕೆ ಬದ್ದ ಎಂದರು.
ಯುಕೆಪಿ ಮೂರು ರಾಜ್ಯಗಳಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಈ ಯೋಜನೆ ಇದೆ. ಇದರಲ್ಲಿ ಎ ಮತ್ತು ಬಿ ಎಂದು ಯೋಜನೆ ಮಾಡಿದ್ದರು. ನಾನು ಎ ಮತ್ತು ಬಿ ಯೋಜನೆಯ ಜಂಝಡ ತೆಗೆದು ಈ ಭಾಗದ ನೀರಾವರಿಗೆ ಆದ್ಯತೆ ನೀಡಿದೆ ಎಂದರು.
ಯಾರು ಯಾವ ಪಕ್ಷದಲ್ಲಿ ಇರುತ್ತಾರೆ ಎಂಬುದು ಮುಖ್ಯ ಅಲ್ಲ. ನಮಗೆ ರೈತರು ಮುಖ್ಯ. ರೈತರು ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲ ಪಕ್ಷಗಳೂ ರೈತರಿಗೆ ಸೇರಿದ್ದು ಎಂದರು.
ವಿಜಯಪುರ ಜಿಲ್ಲೆಯ ತ್ಯಾಗ ದೊಡ್ಡದು. ನೀರಾವರಿಗೆ ಜಮೀನು ಕಳೆದುಕೊನಮಡ ರೈತರಿವೆ ಅನಂತ ಪ್ರಣಾಮ ಎಂದರು.
ರೈತರು ತ್ಯಾಗ ಮಾಡದೇ ಇದ್ದರೇ ಉತ್ತರ ಕರ್ನಾಟಕದಲ್ಲಿ ನೀರಾವರಿ ಸಾಧ್ಯವಿರಲಿಲ್ಲ. ಅಜ್ಜ ಮುತ್ತಜ್ಜನ ಕಾಲದಿಂದ ಉಳಿಸಿಕೊಂಡು ಬಂದ ಜಮೀನು ತ್ಯಾಗ ಮಾಡಿದ್ದು, ಅವರ ತ್ಯಾಗ ದೊಡ್ಡದು ಎಂದರು.
ನಾನು ನೀರಾವರಿ ಸಚಿವನಾದ ಮೇಲೆ ನ್ಯಾಯಾಧೀಕರಣದಿಂದಾಗಿ ನನ್ನ ಕೈ ಕಟ್ಟಿ ಹಾಕಲಾಗಿತ್ತು. ಅದಾಗ್ಯೂ ಗುತ್ತಿ ಬಸವಣ್ಣ, ಮುಳವಾಡ ಚಿಮ್ಮಲಗಿ ಏತ ನೀರಾವರಿಗೆ ಅಡಿಗಲ್ಲು ಹಾಕಿದೆವು. ಆಲಮಟ್ಟಿ ಅಣೆಕಟ್ಟು ಎತ್ತರಿಸಿದಾಗ ಈ ಎಲ್ಲ ನೀರಾವರಿ ಯೋಜನೆ ಸಾಧ್ಯವಾಗಲಿದೆ ಎಂದರು.
ನನಗೆ ಭಗೀರಥ ಆಗುವ ಕನಸು, ಮನಸ್ಸು ಎರಡೂ ಇಲ್ಲ. ಆದರೆ ನನ್ನ ರೈತರು ಎಂದಿಗೂ ನೀರಿಗೆ ಕೈಯೊಡ್ಡಬಾರದು. ಈ ಭೂ ತಾಯಿಗೆ ಹಸಿರು ಉಡಿಸಬೇಕೆಂಬುದಷ್ಟೇ ನನ್ನ ಕನಸು ಎಂದರು.
ನಾವೆಲ್ಲ ನಿಮ್ಮ ಶಕ್ತಿ, ನಿಮ್ಮ ಬೆಂಬಲದಿಂದ ಆಯ್ಕೆಯಾದವರು. ನಿಮ್ಮ ಬೇಡಿಕೆಗೆ ನ್ಯಾಯ ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದರು.
ಬೂದಿಹಾಳ- ಪೀರಾಪುರ ಯೋಜನೆಯ ಮೂಲಕ ಐವತ್ತು ಸಾವಿರ ಎಕರೆ ನೀರಾವರಿ ಗೊಳಪಡಿಸಲಾಗುತ್ತಿದೆ ಎಂದರು.
ಬೂದಿಹಾಳ ಪೀರಾಪೂರ ಏತ ನೀರಾವರಿಯನ್ನು ಕಾಲಮಿತಿಯಲ್ಲಿ ಮುಗಿಸಿ ನೀರು ಕಲ್ಪಿಸಲಾಗುವುದು. ಅಡ್ಡಿಗಲ್ಲು ಹಾಕಿದ ಮಾತ್ರಕ್ಕೆ ನಮಗೆ ಸಮಾಧಾನ ಇಲ್ಲ. ಯಾವಾಗ ರೈತರ ಜಮೀನಿಗೆ ನೀರು ಹರಿಯುವುದೋ ಆಗ ನಮಗೆ ಸಮಾಧಾನ. ಅಲ್ಲಿಯವರೆಗೆ ವಿಶ್ರಮಿಸಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಪಾಟೀಲ ಮಾತನಾಡಿ, ಕೃಷ್ಣೆ ಉತ್ತರ ಕರ್ನಾಟಕದ ಜೀವ ನದಿ. ಕೃಷ್ಣೆಯ ನೀರನ್ನು ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುತ್ತಿದ್ದು ಈ ಭಾಗದ ರೈತರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ಈ ಹಿಂದಿನ ಸರ್ಕಾರ ಕೇವಲ ಡೋಂಗಿ ಪದ ಹೇಳಿ ಹೋದರು. ನಮ್ಮ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೋದವರು ಏನು ಮಾಡಿದರೋ ಗೊತ್ತಿಲ್ಲ. ಮತ್ತೊಮ್ಮೆ ರೈತರ ಕಣ್ಣೀರು ಒರೆಸುವುದಾಗಿ ಹೇಳುತ್ತಲೇ ರೈತರ ಕಣ್ಣಲ್ಲಿ ರಕ್ತ ಬರಸಿದರೆಂದು ಆರೋಪಿಸಿದರು.
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಉತ್ತರ ಕರ್ನಾಟಕ ದಲ್ಲಿ ವಿಶೇಷವಾಗಿ ಕೃಷ್ಣಾ ಕೊಳ್ಳದನೀರಾವರಿ ಯೋಜನೆ ಬಗ್ಗೆ ಸ್ಪಷ್ಟ ಮುನ್ನೋಟ ಇಟ್ಟುಕೊಂಡು ಅನುಷ್ಟಾನ ತರುತ್ತಿರುವ ನಿಜವಾದ ಭಗೀರಥ ಬಸವರಾಜ ಬೊಮ್ಮಾಯಿ ಎಂದರು.
ಪೀರಾಪುರ ಬೂದಿಹಾಳ ಯೋಜನೆಯಡಿ 48 ಹಳ್ಳಿಗಳಿಗೆ ನೀರಾವರಿ ಕಲ್ಪಿಸಲು ಹೋರಾಡಿದೆ. ನಾನು ಕಾಂಗ್ರೆಸ್ ನಲ್ಲಿದ್ದೆ. ಬಿಜೆಪಿ ಯ ಜಲಸಂಪನ್ಮೂಲ ಸಚಿವರಾಗಿದ್ದ ಇಂದಿನ ಬಸವರಾಜ ಬೊಮ್ಮಾಯಿ ಆಡಳಿತಾತ್ಮಕ ಅನುಮೋದನೆ ಕೊಡಿಸಿ 1 ಟಿಎಂಸಿ ನೀರು ಕೊಡಿಸಿದರು ಎಂದರು.
ಮುಳವಾಡ ಚಿಮ್ಮಲಗಿ ಏತ ನೀರಾವರಿ ಚಾಲನೆಗೊಳ್ಳಬೇಕಿತ್ತು. ಈ ನಿಟ್ಟಿನಲ್ಲಿ ಅಂದು ಬಂಡಿಯಾತ್ರೆ ಮಾಡಿದೆವು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಾದಯಾತ್ರೆ ಮಾಡಿದರು. ಇಷ್ಟೆಲ್ಲ ಬೆಳವಣಿಗೆ ನಂತರ ಬಸವರಾಜ ಬೊಮ್ಮಾಯಿ ಆಡಳಿತಾತ್ಮಕ ಅನುಮೋದನೆ ನೀಡಿ, ಡಿಪಿಆರ್ ಸಿದ್ದಪಡಿಸಿ ಚಾಲನೆಗೊಳಿಸಿದವರು ಬಸವರಾಜ ಬೊಮ್ಮಾಯಿ ಎಂದರು.
ಪೀರಾಪುರ ಬೂದಿಹಾಳ ಏತ ನೀರಾವರಿ ಲಿಫ್ಟ್ ಬಳಿಯೇ ಇನ್ನೊಂದು ಲಿಫ್ಟ್ ಮಾಡಿ ಹೆಚ್ಚಿನ ನೀರು ಕೊಡಬೇಕು ಎಂದರು.
ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಎಂಟಕ್ಕೆ ಎಂಟು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ತಾವು ಮುಖ್ಯಮಂತ್ರಿ ಆಗುವಂತೆ ಮಾಡುವುದಾಗಿ ವಾಗ್ದಾನ ಮಾಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ನಾ ಮಾಡೇನಿ ನೀ ಮಾಡೇನಿ ಎಂದು ಜಗಳಾಡುವುದರಲ್ಲಿ ಅರ್ಥವಿಲ್ಲ. ಸುಗಂದಿ ಮುರುಗೆಪ್ಪ ಅಣ್ಣನವರಿಂದ ಹಿಡಿದು ಬಾಬುರಾವ ಉಜಿರೆ ಅವರಿಂದ ಆರಂಭವಾದ ಹೋರಾಟ ಇದು ಎಂದರು.
ಸೋಮನಗೌಡ ಸ್ವಚ್ಛ ಹೃದಯ ವ್ಯಕ್ತಿ ಎನ್ನುವ ಕಾರಣಕ್ಕೆ ಅವರಿಗೆ ಚಾಲನೆ ನೀಡುವ ಭಾಗ್ಯ ಸಿಕ್ಕಿದೆ ಎಂದರು.
ಕೃಷ್ಣೆ ಎನ್ನುವುದು ಕೆಲವರಿಗೆ ಕಾಮದೇನು ಕಲ್ಪವೃಕ್ಷ ಎಂಬಂತಾಗಿದೆ. ಎಸ್ಟಿಮೇಟ್ ಹೆಚ್ಚಿಗೆ ಮಾಡೋದು ಹಣ ಲೂಟಿ ಮಾಡಿ ದೊಡ್ಡ ದೊಡ್ಡ ಬಂಗಲೆ ಕಟ್ಟೋದು ಕೆಲವರ ಚಾಳಿ ಆಗಿದೆ ಎಂದರು.
ಇದೊಂದು ಮಲಾಯಿ ಆಗಿದೆ. ಹೆಚ್ಚುವರಿ ಹಣದಲ್ಲೇ ಕೃಷ್ಣಾ ಯೋಜನೆ ಪೂರ್ಣಗೊಳ್ಳುತ್ತಿತ್ತು. ಹಿಂದಿನ ಸರ್ಕಾರಗಳು ಹೀಂಗ ಹಣ ಕೊಳ್ಳೆ ಹೊಡೆದಾರಲ್ಲ….ಅಬ್ಬಬ್ಬ….ಅದೇನು ಹೇಳಬಾರದು. ಸಚಿವ ಕಾರಜೋಳ ಹಾಗೂ ರಾಕೇಶ ಸಿಂಗ್ ಅವರು ಈ *ಅಬೌ* ಎಂಬ ಪದ್ದತಿ ತೆಗೆದು ಹಾಕಬೇಕು ಎಂದರು.
ತಿನ್ನಲಿಕ್ಕೂ ಒಂದು ಲೆಕ್ಕ ಬೇಕು. ಸಿಎಂ ಬೊಮ್ಮಾಯಿ ಅವರೇ ನೀವಾದರೂ ಅಬೌ ಎಂಬ ಪದ್ದತಿ ತೆಗೆದುಹಾಕಿ ಎಂದರು.
ಈ ಬಾರಿ ಬಜೆಟ್ ನಲ್ಲಿ 25 ಸಾವಿರ ಕೋಟಿ ಕೊಡ ಬೇಕಿತ್ತು, ಆದರೆ ಐದು ಸಾವಿರ ಕೋಟಿ ಕೊಟ್ಟಿದ್ದೀರಿ….ಆದರೆ ಈ ಕಾರ್ಯಕ್ರಮದಲ್ಲಿ ನಮಗೆ ನೀರು ಕೊಡುವ ಬಗ್ಗೆ ವಾಗ್ದಾನ ಮಾಡಿ ಎಂದರು.
ಬೊಮ್ಮಾಯಿ ಬಂದ ಮೇಲೆನಾವು ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆ. ಈ ಮೊದಲು ಬರೀ ಒಣ ಒಣ ಠಣಠಣ ಎಂದರು.
ಸೋಮನಗೌಡರಿಗೆ ಭಾಷಣ ಬರಲ್ಲ. ಸಂಭಾವಿತ. ಆದರೆ ಅವರು ಕೆಲಸಗಾರರು. ಅವರಿಗೆ ಅವಕಾಶ ಕೊಡಿ. ಹೊಸ ಹೊಸ ಗಿರಾಕಿಗಳು ಹುಟ್ಟಿತ್ತಿದ್ದು ಅವರಿಗೆ ಯಾವುದೇ ಬೆಲೆ ಕೊಡಬೇಡಿ ಮಾಡಿ. 10 ಸಾವಿರ ಕೋಟಿ ಅನುದಾನ ಕೊಡಿ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಂಸದನಾಗಿ ನಾನು ಮಾಡಿದ ಕೆಲಸ ಅಪಾರ. ನಾನೆಂದೂ ಹೆಸರು ಹೇಳಿಕೊಂಡಿಲ್ಲ. ಬರೆದುಕೊಂಡಿಲ್ಲ. ಪ್ರಚಾರ ಬಯಸಿಲ್ಲ ಎಂದು ಯತ್ನಾಳ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮುಂದುವರಿದು ಈ ಭಾಗದ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಿಎಂ ಬೊಮ್ಮಾಯಿ ಅವರಲ್ಲಿ ವಿನಂತಿಸಿದರು.
ರೇವಣಸಿದ್ದೇಶ್ವರ ಏತ ನೀರಾವರಿ ಮೂಲಕ ಇಂಡಿ ಭಾಗಕ್ಕೂ ನೀರೊದಗಿಸಬೇಕು ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸುಮಾರು ಐವತ್ತು ಸಾವಿರ ಎಕರೆಗೆ ನೀರಾವರಿ ಕಲ್ಪಿಸುವ ಈ ಯೋಜನೆ ಶೀಘ್ರ ಪೂರ್ಣ ಗೊಳಿಸಿ ಸಂಕ್ರಮಣದ ಹೊತ್ತಿಗೆ ನೀರು ಹರಿಸಲು ಸೂಚಿಸಿದ್ದಾಗಿ ತಿಳಿಸಿದರು.
ಸುಮಾರು ಐವತ್ತು ವರ್ಷದ ಹಿಂದೆ ಅಖಂಡ ವಿಜಯಪುರ ಜಿಲ್ಲೆಯ ನೀರಾವರಿಗೆ ಸಾಕಷ್ಟು ಜನ ಶ್ರಮಿಸಿದರು. ಕಾಂಗ್ರೆಸ್ ನವರು ಮಾಡಿದ ಘೋರ ಅಪರಾಧ, ಅನ್ಯಾಯದಿಂದ ಅಖಂಡ ವಿಜಯಪುರ ನೀರಾವರಿ ಆಗಲಿಲ್ಲ. ವೀರಾವೇಶದಿಂದ ಭಾಷಣ ಮಾಡುವ ಕಾಂಗ್ರೆಸ್ ನವರು ಅಂದು ತ್ರಿಬಲ್ ಸರ್ಕಾರ ಇದ್ದಾಗಲೂ ವಿಜಯಪುರ ನೀರಾವರಿ ಮಾಡಲಿಲ್ಲ. ಕೇವಲ 2.5 ಕೋಟಿ ರೂ. ನೀಡದ ಕಾರಣ ನೀರಾವರಿ ಆಗಲಿಲ್ಲ ಎಂದರು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಮುಂಬೈ ಸರ್ಕಾರದಲ್ಲೂ ಕಾಂಗ್ರೆಸ್ ಇದ್ದಾಗ ನೀರಾವರಿಗೆ ಆದ್ಯತೆ ನೀಡಲಿಲ್ಲ. ಇದೀವ ಡಬ್ಬಲ್ ಇಂಜಿನ್ ಸರ್ಕಾರ ಇದ್ದರೂ ನೀರಾವರಿ ಆಗುತ್ತಿಲ್ಲವೆಂದು ಕಾಂಗ್ರೆಸ್ ಟೀಕೆ ಮಾಡುತ್ತಿದ್ದು ಅದರಲ್ಲಿ ಹುರುಳಿಲ್ಲ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಶಾಸಕ ರಮೇಶ ಭೂಸನೂರ,
ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ
ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಪೂಜ್ಯ ಮಡಿವಾಳೇಶ್ವರ ಸ್ವಾಮೀ ಜಿ, ಸಿದ್ದರಾಮ ಶಿವಾಚಾರ್ಯರು, ಕೇಸರಟ್ಟಿ ಸೋಮಲಿಂಗ ಶ್ರೀ, ಜಯ ಶಾಂತಲಿಂಗೇಶ್ವರ ಸ್ವಾಮೀಜಿ, ನಾವದಗಿ ಸ್ವಾಮೀಜಿ, ಗುಂಡಕನಾಳ, ಬಂಡೆಪ್ಪನಹಳ್ಳಿ ಸ್ವಾಮೀಜಿಗಳು, ಶಿವಬಸವ ಶಿವಾಚಾರ್ಯರು, ಸಣ್ಣಕ್ಕಿ ಮುತ್ಯಾ ಮತ್ತಿತರರಿದ್ದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸ್ವಾಗತಿಸಿದರು. ಬಂಟನೂರ ಗ್ರಾಮದ ರೈತರಿಂದ
ಗೋವು ಮತ್ತು ಜೋಡೆತ್ತು ಕಾಣಿಕೆ ನೀಡಿದರು.
ಜೊತೆಗೆ ಸಚಿವ ಗೋವಿಂದ ಕಾರಜೋಳ ಮತ್ತು ಸಿಎಂ ಬಸವರಾಜ ಬೊಮ್ಮಾಯಿಗೆ ಬೆಳ್ಳಿ ಗದೆ ಕಾಣಿಕೆಯಾಗಿ ನೀಡಲಾಯಿತು.