ಆಹಾರ- ಆರೋಗ್ಯಕೊಪ್ಪಳರಾಜ್ಯ ಸುದ್ದಿ

ಪೋಲಿಯೊ ಕಾರ್ಯಕ್ರಮಕ್ಕೆ ಗವಿಶ್ರೀ ಹಾಗೂ ಶಾಸಕರಿಂದ ಚಾಲನೆ

ಕೊಪ್ಪಳ, : ಮಕ್ಕಳಿಗೆ ಪೋಲಿಯೊ ಹನಿ ಹಾಕುವುದರ ಪೋಲಿಯೊ ಕಾರ್ಯಕ್ರಮಕ್ಕೆ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀಗವಿಸಿದ್ದೇಶ್ವರ ಮಠದ ಆವರಣದಲ್ಲಿ ಹಾಗೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ನಗರದ ಬಸ್ ನಿಲ್ದಾಣದಲ್ಲಿ ಇಂದು (ಫೆ. 27) ಚಾಲನೆ ನೀಡಿದರು. ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಜೀವದ ಎರಡು ಹನಿಗಳಿಂದ ಪೋಲಿಯೊ ಪಿಡುಗಿನ ಮೇಲೆ ವಿಜಯ ಸಾಧಿಸುವುದನ್ನು ಮುಂದುವರೆಸೋಣ” ಎಂಬ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಭಾನುವಾರದಂದು ಶ್ರೀಗವಿಸಿದ್ದೇಶ್ವರ ಮಠದ ಆವರಣದಲ್ಲಿ ಹಾಗೂ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಮುಂದುವರೆದ ಪೋಲಿಯೊ ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯ 0 ಯಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಿ ಯಶಸ್ವಿಗೊಳಿಸಬೇಕು. ಸಾರ್ವಜನಿಕರು ಸಹ ತಮ್ಮ ಮಕ್ಕಳಿಗೆ ಸಮೀಪದ ಅಂಗನವಾಡಿ ಕೇಂದ್ರ, ಶಾಲೆ, ಉಪಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಬೂತ್‌ಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ಪೋಲಿಯೊ ಪಿಡುಗಿನ ಮೇಲೆ ವಿಜಯ ಸಾಧಿಸುವುದನ್ನು ಮುಂದುವರೆಸಿ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ಮಾತನಾಡಿ, ಪೋಲಿಯೊ ರೋಗ ಒಂದು ಸಂಕ್ರಾಮಿಕ ರೋಗವಾಗಿದ್ದು, ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಭಾಗವಾಗಿ “ಜೀವದ ಎರಡು ಹನಿಗಳಿಂದ ಪೋಲಿಯೊ ಪಿಡುಗಿನ ಮೇಲೆ ವಿಜಯ ಸಾಧಿಸುವುದನ್ನು ಮುಂದುವರೆಸೋಣ” ಎಂಬ ಶೀರ್ಷಿಕೆಯಡಿ ಆರೋಗ್ಯ ಇಲಾಖೆ ಲಸಿಕೆ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ 0 ಯಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಮೊದಲ ದಿನ ಬೂತ್‌ನಲ್ಲಿ ಲಸಿಕೆ ನೀಡಲಾಗುವುದು. ನಂತರ ಲಸಿಕಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ನೀಡುತ್ತಾರೆ. ಆದ್ದರಿಂದ ಎಲ್ಲಾ ಸಾರ್ವಜನಿಕರು 5 ವರ್ಷದೊಳಗಿನ ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದ ಚಿನ್ನೂರು, ಜಿಲ್ಲಾ ಆರ್.ಸಿ ಹೆಚ್ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಬ ಡಾ. ಗೌರಿಶಂಕರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜೇನೆಯ, ವೈದ್ಯರಾದ ಡಾ. ಕೆ.ಜಿ ಕುಲಕರ್ಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂಧಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಕಿರಿಯ ಆರೋಗ್ಯ ಸಹಾಯಕರು, ಆಶಾ ಮೇಲ್ವಿಚಾರಕರು, ಇನ್ನರ್ ವಿಲ್ ಕ್ಲಬ್ ಹಾಗೂ ಸರ್ಕಾರಿಯೇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!