ರಾಜ್ಯ ಸುದ್ದಿ

ಖೋಟಾ ನೋಟಿನೊಂದಿಗೆ ಐವರ ಬಂಧನ

ಬೆಳಗಾವಿ; ಗೋಕಾಕ-ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಮೂಲಕ ಸಾಗುವ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದನ್ನು ತಪಾಸಣೆ ಮಾಡಿದಾಗ 100, ಹಾಗೂ 500 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದು, ಐವರನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು. ಬೆಳಗಿನ ಜಾವ ಗಸ್ತು ಪೊಲೀಸರು ನಡೆಸಿದ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಮೂಡಲಗಿ ತಾಲ್ಲೂಕಿನ ಅರಭಾವಿಯ ಅನ್ವರ ಮೊಹ್ಮದ ಸಲೀಂ ಯಾದವಾಡ, ಮಹಾಲಿಂಗಪೂರದ ಸದ್ದಾಂ ಮುಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ವನಶೆಣವಿ ಮತ್ತು ವಿಠ್ಠಲ ಹಣಮಂತ ಹೊಸಕೋಟಿ ಬಂಧಿತರು. ಕಳೆದ ಜೂ. 29 ರಂದು ಬಿಳಿ ಬಣ್ಣದ ಸ್ವೀಪ್ಟ್ ಕಾರಿನಲ್ಲಿ ಗೋಕಾಕ ತಾಲೂಕಿನ ನಾಕಾದಿಂದ ಕಡಬಗಟ್ಟಿ ರಸ್ತೆಯ ಮುಖಾಂತರ ಬೆಳಗಾವಿ ಕಡೆಗೆ 100 ರೂ. ಮುಖ ಬೆಲೆಯ 305 ಹಾಗೂ 500 ರೂ. 6792 ನಕಲಿ ನೋಟು ತೆಗೆದುಕೊಂಡು ಹೊರಟಾಗ ಗೋಕಾಕ ಪೊಲೀಸರು ಅರಬಾವಿಯ ಅನ್ವರ ಮಹ್ಮದಸಲೀಂ ಯಾದವಾಡ (26), ಮಹಾಲಿಂಗಪೂರದವರಾದ ಸದ್ದಾಂ ಮೂಸಾ ಯಡಹಳ್ಳಿ (27), ದುಂಡಪ್ಪ ಮಹಾದೇವ ಒಣಶೇವಿ (27), ರವಿ ಚನ್ನಪ್ಪ ಹ್ಯಾಗಾಡಿ (27), ವಿಠ್ಠಲ ಹಣಮಂತ ಹೊಸಕೋಟಿ (29), ಮಲ್ಲಪ್ಪ ಅಲ್ಲಪ್ಪ ಕುಂಬಾಳಿ (29) ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುವ ಹಾಗೂ ಮನಿ ಡಬ್ಬಿಂಗ್ ಮಾಡಿ ಗೋಕಾಕ, ಮಹಾಲಿಂಗಪೂರ, ಮುಧೋಳ, ಯರಗಟ್ಟಿ, ಹಿಡಕಲ್ ಡ್ಯಾಂ, ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 1 ಲಕ್ಷ ಅಸಲಿ ನೋಟಿಗೆ 4 ಲಕ್ಷ ನಕಲಿ ನೋಟುಗಳನ್ನು ಕೊಟ್ಟು ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿರುವುದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು. ಎ1 ಆರೋಪಿ ಅನ್ವರ್ ಯಾದವಾಡ ಈತನ ಅರಬಾವಿ ಗ್ರಾಮದ ಮನೆಯಿಂದ ಖೋಟಾ ನೋಟ್ ಪ್ರಿಂಟ್ ತೆಗೆಯಲು ಉಪಯೋಗಿಸಿದ ಕಂಪ್ಯೂಟರ್, ಸಿಪಿಯು, ಪ್ರಿಂಟರ್, ಸ್ಕ್ರೀನಿಂಗ್ ಬೋಡ್೯, ಪೆಂಟ್, ಶೈನಿಂಗ್, ಸ್ಟೀಕರ್, ಡಿಕೋಟಿಂಗ್ ಪೌಡರ್, ಪ್ರಿಂಟಿಂಗ್ ಪೇಪರ್, ಕಟರ್ ಬ್ಲೇಡ್ ಗಳು, ಆರು ಮೊಬೈಲ್, ಒಂದು ಬಿಳಿ ಬಣ್ಣದ ಕಾರ್ ಸೇರಿದಂತೆ 52,3900 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ ಎಂದರು. ಈ ಪ್ರಕರಣದಲ್ಲಿ ಎಎಸ್ಐ ಒಬ್ಬರು ಶಾಮಿಲಾಗಿರುವ ಬಗ್ಗೆ ಮಾಹಿತಿ ಇದೆ. ಅದನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ನಕಲಿ ನೋಟ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

error: Content is protected !!