ಸೋಮದೇವರಹಟ್ಟಿ ತಾಂಡಾ-1ರಲ್ಲಿ ಸಂಭ್ರಮ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಪೂರ್ಣ
ವಿಜಯಪುರ: ರಾಜ್ಯ-ಹೊರ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ-1ರ ದುರ್ಗಾದೇವಿ ಜಾತ್ರಾ ಮಹೋತ್ಸವ ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಧರ್ಮದರ್ಶಿ ಜಗನು ಮಹಾರಾಜ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ಜು. 4 ರಿಂದಲೇ ಜಾತ್ರೋತ್ಸವಕ್ಕೆ ಚಾಲನೆ ದೊರಕಲಿದ್ದು ಎರಡು ದಿನ ವಿವಿಧ ಧಾರ್ಮಿಕ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಅನೇಕ ಗಣ್ಯರು ಹಾಗೂ ಭಕ್ತರು ಪಾಲ್ಗೊಳ್ಳುವರೆಂದು. ಜು. 4 ರಂದು ರಾತ್ರಿ 9ಕ್ಕೆ ಪುಣೆಯ ಕಲಾ ತಂಡದಿಂದ ಮರಾಠಿ ಲಾವಣಿ ಕಾರ್ಯಕ್ರಮ ನಡೆಯಲಿದೆ. ಜು. 5 ರಂದು ಮಹಾಪೂಜೆ, ಆರತಿ ಕಾರ್ಯಕ್ರಮ ನಡೆಯಲಿದ್ದು ಅಪಾರ ಭಕ್ತರು ಪಾಲ್ಗೊಳ್ಳುವರು. ಕೇಂದ್ರ ಸಚಿವ ಶ್ರೀಪಾದ ನಾಯಕ ಉದ್ಘಾಟನೆ ನೆರವೇರಿಸುವರು. ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು. ರಾಜ್ಯ ಕಾನೂನು ಸಂಸದೀಯ ಸಚಿವ ಎಚ್.ಕೆ. ಪಾಟೀಲ, ಮೀನುಗಾರಿಕೆ ಸಚಿವ ಮಂಕಾಳೆ ವೈದ್ಯ, ಮಹಾರಾಷ್ಟ್ರದ ಸಣ್ಣ ನೀರಾವರಿ ಸಚಿವ ಸಂಜಯ ರಾಠೋಡ, ಸಂಸದ ರಮೇಶ ಜಿಗಜಿಣಗಿ, ಮುಂಬೈ ಸಂಸದ ಸಂಜಯ ಪಾಟೀಲ, ಗೋವಾ ಶಾಸಕ ಮೈಕೆಲ್ ಲೊಬೊ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಸತೀಶ ಶೈಲ, ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ, ಪ್ರಕಾಶ ಹುಕ್ಕೇರಿ, ಮುಂಬೈನ ಮಹಾದೇವ ಜಾನಕರ, ಉಪ ಸಭಾಪತಿ ರುದ್ರಪ್ಪ ಲಮಾಣಿ ಮತ್ತಿತರರು ಪಾಲ್ಗೊಳ್ಳುವರು.
ಶಾಸಕ ಪ್ರವೀಣ ಅರಳೇಕರ, ರಾಜೇಶ ಪಾಟೀಲ, ಕೃಷ್ಣಾ ನಾಯಕ, ಡಾ.ಚಂದ್ರು ಲಮಾಣಿ, ಕಪೀಲ ಮೋಹನ, ಡಾ.ಶರತ, ಬಿ.ಸುಶೀಲಾ, ಶಿವಶಂಕರ ನಾಯಕ, ಜಯದೇವ ನಾಯಕ ಹೀಗೆ ಅನೇಕ ಉನ್ನತ ಹುದ್ದೆಗಳಲ್ಲಿರುವ ಗಣ್ಯರು ಪಾಲ್ಗೊಳ್ಳುವರು.
ಪ್ರತಿ ವರ್ಷದಂತೆ ಈ ವರ್ಷವೂ ಪೂಜೆ-ಪುನಸ್ಕಾರಗಳು ನಿಯಮದಂತೆ ನಡೆಯಲಿವೆ. ದುರ್ಗಾದೇವಿ ದೇವಸ್ಥಾನಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ನೆರವೇರಲಿದೆ ಎಂದರು. ಮುಖಂಡ ಡಾ.ಬಾಬು ರಾಜೇಂದ್ರ ನಾಯಕ್ ಮಾತನಾಡಿ, ದುರ್ಗಾದೇವಿ ಅತ್ಯಂತ ಶಕ್ತಿಯುತ ದೇವತೆ. ಭಕ್ತರ ಅಭಿಲಾಷೆ ಈಡೇರಿಸುವ ಈ ದೇವಿ ಜಾತ್ರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಈ ದೇವಸ್ಥಾನದಿಂದಾಗಿಯೇ ಅತ್ಯಂತ ಹಿಂದುಳಿದ ತಾಂಡಾವೊಂದು ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಎಂದರು. ಮುಖಂಡರಾದ ಬಂಜಾರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಎಲ್. ಚವಾಣ್, ಡಿ.ಎಚ್. ಜಾಧವ, ಭೀಮು ರಾಠೋಡ ಮತ್ತಿತರರಿದ್ದರು.