ಬಿಜೆಪಿಯ ಆಂತರಿಕ ಸಮೀಕ್ಷೆ ಏನೆನ್ನುತ್ತದೆ? ಲೋಕಸಭೆಯಲ್ಲಿ ಸಿಗುವ ಸ್ಥಾನ ಎಷ್ಟು? ಸಿಎಂ ಸಿದ್ದರಾಮಯ್ಯ ಬಿಚ್ಚಿಟ್ಟ ರಹಸ್ಯವೇನು ಗೊತ್ತಾ?
ಸರಕಾರ ನ್ಯೂಸ್ ಮೈಸೂರು
ತಾನೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ಕೇವಲ 200 ಲೋಕಸಭಾ ಸೀಟುಗಳನ್ನು ಗೆಲ್ಲುವುದೂ ಕಷ್ಟ ಎನ್ನುವುದು ಗೊತ್ತಾಗಿದೆ. ಹೀಗಾಗಿ ತಂತ್ರಗಾರಿಕೆ ಕಾರಣದಿಂದ 400 ಸೀಟು ಗೆಲ್ಲುವುದಾಗಿ ಹೇಳುತ್ತಿದೆ. ದೇಶದ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತೇವೆ ಎಂದು ಹೊರಟವರೇ ಜನರ ಎದುರು ಮೂರ್ಖರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಬಾರಿ 400 ದಾಟುತ್ತೇವೆ ಎಂದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ , ಬಿಜೆಪಿಯದ್ದು ಅಭಿವೃದ್ಧಿ ಶೂನ್ಯ ಸಾಧನೆ. ಮೋದಿಯವರ ಸುಳ್ಳಿನ ಪಿಕ್ಚರ್ ಇನ್ನೂ ಬಾಕಿ ಇದೆ. ಸುಳ್ಳಿನ ಕನಸುಗಳನ್ನು ಬಿತ್ತುತ್ತಾ ಬಂದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 20 ಸೀಟುಗಳವರೆಗೆ ಗೆದ್ದೇ ಗೆಲ್ಲುತ್ತದೆ. ಸೋಲುವ ಭಯಕ್ಕೆ ಒಳಗಾಗಿರುವ ಬಿಜೆಪಿಯವರು ಕರ್ನಾಟಕದಲ್ಲಿ ಬಿಜೆಪಿ 28 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಬಿಜೆಪಿಯವರಿಗೆ ಸಂಸ್ಕಾರವಿಲ್ಲ
ಕೇಂದ್ರ ಗೃಹಸಚಿವರ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಯತೀಂದ್ರ ಸಿದ್ದರಾಮಯ್ಯರವರಿಗೆ ಸಂಸ್ಕಾರದ ಪಾಠವನ್ನು ಬಿಜೆಪಿ ಹೇಳುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿಯವರಿಗೆ ಸಂಸ್ಕಾರವಿಲ್ಲ. ಯತೀಂದ್ರ ಅವರು ಸಿಬಿಐ ನವರು ಕೊಟ್ಟಿರುವ ರಿಪೋರ್ಟ್ ಆಧಾರದ ಮೇಲೆ ಹೇಳಿಕೆಯನ್ನು ನೀಡಿದ್ದಾರೆಯೇ ಹೊರತು, ಅಮಿತ್ ಶಾ ಅವರಿಗೆ ಅವಮಾನ ಮಾಡುವ ಉದ್ದೇಶ ಅವರಿಗೆ ಇಲ್ಲ ಎಂದರು.
ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ
ಕಾಂಗ್ರೆಸ್ ಪಕ್ಷಕ್ಕೆ ಇತರೆ ಪಕ್ಷಗಳಿಂದ ಜನರು ಬರುವ ಸಾಧ್ಯತೆಯಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನರು ಸೇರ್ಪಡೆಯಾಗಲು ಉತ್ಸುಕರಿದ್ದಾರೆ. ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷದಲ್ಲಿ ಸ್ವಾಗತವಿದೆ ಎಂದರು.
ಮೋದಿ ಸರ್ಕಾರದ ವೈಫಲ್ಯ, ನಮ್ಮ ಸಾಧನೆಯಿಂದ ಕಾಂಗ್ರೆಸ್ ಗೆಲುವು ಖಚಿತ
ರಾಜ್ಯದಲ್ಲಿ ಪ್ರಧಾನಿ ಮೋದಿಯವರು ರ್ಯಾಲಿ ಪ್ರಾರಂಭಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ವಿಧಾನಸಭಾ ಚುನಾವಣೆಯಲ್ಲಿಯೂ ಮೋದಿಯವರು ಪ್ರಚಾರ ಕೈಗೊಂಡಿದ್ದರೂ, ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರದ ವೈಫಲ್ಯಗಳು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆಲುವನ್ನು ಖಾತ್ರಿಪಡಿಸಿದೆ ಎಂದರು.
ಗ್ಯಾರಂಟಿ ಪದವನ್ನು ಕದ್ದಿದ್ದಾರೆ
ಮೋದಿ ಗ್ಯಾರಂಟಿ ಗಳ ಬಗ್ಗೆ ಮಾತನಾಡಿ ನಮ್ಮಿಂದ ಗ್ಯಾರಂಟಿ ಪದವನ್ನು ಕದ್ದಿದ್ದಾರೆ ಎಂದರು.
2014 ರಲ್ಲಿ 47 ರೂ.ಗಳಿದ್ದ ಡೀಸೆಲ್ ಬೆಲೆ ಈಗ 97 ರೂಗಳಾಗಿದೆ. 77ರೂ.ಗಳಿದ್ದ ಪೆಟ್ರೋಲ್ ಬೆಲೆ ಈಗ 105ರೂ.ಗಳಾಗಿದೆ. ಅಡುಗೆ ಅನಿಲ ಬೆಲೆಯನ್ನು ಚುನಾವಣೆ ಸಂದರ್ಭ ದಲ್ಲಿ ಇಳಿಸಿದ್ದಾರೆ. ಈ ಬೆಲೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 414ರೂ.ಗಳಿತ್ತು. ನಮ್ಮ ಕಾಲಕ್ಕಿಂತಲೂ ಬಿಜೆಪಿ ಕಾಲದಲ್ಲಿ ಬೆಲೆ ಹೆಚ್ಚಾಗಿದೆ ಎಂದರು.ಜನರ ಮೇಲೆ ಇದು ಭಾರವಾಗಿಲ್ಲವೆ ಎಂದರು.
ಅಚ್ಚೇ ದಿನ್ ಆಯೇಗಾ, ಪೆಟ್ರೋಲ್, ಡೀಸಲ್ ಬೆಲೆ ಕಡಿಮೆ ಮಾಡುತ್ತೇವೆಂದು ಹೇಳಿ ಕಡಿಮೆ ಮಾಡಿದರೆ? ಎಂದು ಪ್ರಶ್ನಿಸಿದರು.
ಕಚ್ಚಾ ತೈಲದ ಬೆಲೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಕಡಿಮೆಯಾಗಿದೆ. ಆ ಆಧಾರದಲ್ಲಿ ಇಂದನ ಬೆಲೆ ಕಡಿಮೆಯಾಗಬೇಕಿತ್ತು. ಯಾಕೆ ಮಾಡಿಲ್ಲ ಎಂದರು.
ಸತ್ಯ ಹೇಳಿದರೆ ಅವರ ದೃಷ್ಟಿಯಲ್ಲಿ ಗರ್ವ
ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗಳ ಗರ್ವಭಂಗವಾಗಬೇಕೆಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನನಗೆ ಯಾವ ಗರ್ವವೂ ಇಲ್ಲ. ದೇವೇಗೌಡರು ಹೇಳಿದ್ದಕ್ಕೆ ಹೇಳಿಕೆ ನೀಡಿದ್ದೇನೆ ಎಂದರು. ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದು ನಿಜ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಅದನ್ನು ಹೇಳಿದರೆ ತಪ್ಪೇ ಎಂದರು.
ತಮಗೆ ಮೋದಿಯವರೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ದೇವೇಗೌಡರು ಹೇಳಿದ್ದಾರೆ. ಹಾಗಾದರೆ ಮೇಕೆದಾಟು ಅಣೆಕಟ್ಟು ಮಾಡಿಸಲಿ. ಸುಳ್ಳು ಯಾಕೆ ಹೇಳುತ್ತಾರೆ. ಎನ್.ಡಿ.ಎ ಬಂದರೆ ಮಾಡಿಸುತ್ತಾರೆ ಎನ್ನುವವರು ಈಗಲೇ ಮಾಡಿಸಲಿ ಎಂದರು. ಸತ್ಯ ಹೇಳಿದರೆ ಅವರ ದೃಷ್ಟಿಯಲ್ಲಿ ಗರ್ವ. ಸುಳ್ಳು ಹೇಳಿದವರು ಅವರು. ನಾನು ಸತ್ಯ ಹೇಳಿದರೆ ಗರ್ವ ಎನ್ನುತ್ತಾರೆ. ಇದಕ್ಕೆ ಏನು ಮಾಡುವುದು ಎಂದರು.
ಹೋದ ಕಡೆಯೆಲ್ಲಾ ನಿಮ್ಮ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರೀತಿ ತೋರುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಬಹಳ ವರ್ಷ ಜೊತೆಯಲ್ಲಿದ್ದೇವಲ್ಲಾ ಅದಕ್ಕೆ ಎಂದರು.
ಜನರ ಜೊತೆಯಾಗಬೇಕು
ಮೈತ್ರಿ ಎಂದರೇನು ಎಂದು ಈ ಬಾರಿ ತೋರಿಸುತ್ತೇವೆ ಎಂಬ ಹೇಳಿಕೆಗೆ ಉತ್ತರಿಸಿ ಕಳೆದ ಬಾರಿಯೂ ತೋರಿಸಿದ್ದರಲ್ಲ ಎಂದು ವ್ಯಂಗ್ಯವಾಡಿದರು. ನಾವು ಜೊತೆಯಾಗುವುದಲ್ಲ ಜನರು ಜೊ ತೆಯಾಗಬೇಕು. ಜನರು ಯಾವ ಪಕ್ಷಕ್ಕೂ ಸೇರಿದವರಲ್ಲ.ಬಡವರ ಹಸಿವು ನೀಗಿಸಬೇಕು ಎಂದರು.