ಕಾರಜೋಳದಲ್ಲಿ ಕಾಲುವೆ ಒಡೆದ ಕಿರಾತಕರು, ಕುಡಿಯಲು ನೀರು ಬಿಟ್ಟರೆ ಹೀಗಾ ಮಾಡೋದು?
ಸರಕಾರ ನ್ಯೂಸ್ ವಿಜಯಪುರ
ಜನ ಜಾನುವಾರುವಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗೆ ನೀರು ಹರಿಸಿದರೆ ಕಾಲುವೆ ಒಡೆದು ಜಮೀನು ಮೂಲಕ ಕೆರೆ ಭರ್ತಿ ಮಾಡಿದ ಘಟನೆ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಿಸನಂ 367ರಲ್ಲಿ ಹಾದು ಹೋಗಿರುವ ಬಬಲೇಶ್ವರ ಶಾಖಾ ಕಾಲುವೆ-1ರ ಚೈ. 1.95 ಕಿಮೀನಲ್ಲಿ ಕಾಲುವೆ ಒಡೆದು ಕಾರಜೋಳ ಕೆರೆಗೆ ರೈತರ ಹೊಲದ ಮುಖಾಂತರ ನೀರು ಹರಿಬಿಡಲಾಗಿದೆ.
ಮೇ 22ರಂದೇ ಈ ಘಟನೆ ನಡೆದಿದ್ದು ಸ್ಥಳ ಪರಿಶೀಲನೆ ನಡೆಸಿರುವ ಕೆಬಿಜೆಎನ್‌ಎಲ್ ಅಧಿಕಾರಿಗಳು ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಲಮಟ್ಟಿ ಜಲಾಶಯದಿಂದ ಚಿಮ್ಮಲಗಿ ಹಾಗೂ ಮುಳವಾಡ ಏತ ನೀರಾವರಿ ಕಾಲುವೆ ವ್ಯಾಪ್ತಿಗೆ ಬರುವ ಗ್ರಾಮಗಳ ಜನ-ಜಾನುವಾರುವಿಗೆ ಕುಡಿಯುವ ಉದ್ದೇಶಕ್ಕಾಗಿ ಮೇ 15ರಿಂದ 1.5 ಟಿಎಂಸಿಯಂತೆ ನೀರು ಹರಿಬಿಡಲಾಗಿದೆ. ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಉಪಯೋಗವಾಗುವಂತೆ ನೋಡಿಕೊಳ್ಳಲು ಕಂದಾಯ, ಹೆಸ್ಕಾಂ, ಪೊಲೀಸ್ ಹಾಗೂ ನೀರಾವರಿ ಇಲಾಖೆ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿದೆ. ಅದರಂತೆ ಮುಳವಾಡ ಏತ ನೀರಾವರಿ ಯೋಜನೆಯ 4ನೇ ‘ಎ’ ಹಂತದಡಿ ಬರುವ ಬಬಲೇಶ್ವರ ಶಾಖಾ ಕಾಲುವೆಗೆ ಮೇ 18 ರಿಂದ ನಿರಂತರವಾಗಿ ನೀರು ಹರಿಬಿಡಲಾಗಿದೆ. ಮೇ 22ರಂದು ಕಾರಜೋಳ ಹತ್ತಿರ ಅನಾಮಧೇಯ ವ್ಯಕ್ತಿಗಳು ಕಾಲುವೆ ಒಡೆದು ಕಾರಜೋಳ ಕೆರೆಗೆ ರೈತರ ಹೊಲಗಳ ಮುಖಾಂತರ ನೀರು ತೆಗೆದುಕೊಂಡಿದ್ದಾರೆಂಬುದು ಗೊತ್ತಾಗಿದೆ.
ಕಾಲುವೆ ಒಡೆದ ಸ್ಥಳಕ್ಕೆ ಸಹಾಯಕ ಇಂಜಿನಿಯರ್ ವಿನಯ ವೆಂಕಪ್ಪ ರಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಬಲೇಶ್ವರ ಶಾಖಾ ಕಾಲುವೆ-1ರ ಮೂಲಕ ಮುಳವಾಡ, ಕಾಖಂಡಕಿ, ತೊನಶ್ಯಾಳ, ಬಬಲೇಶ್ವರ ಹಾಗೂ ನಿಡೋಣಿ ಗ್ರಾಮಗಳಲ್ಲಿ ಬರುವ ಕೆರೆಗಳನ್ನು ತುಂಬಿಸುವ ಒಂದು ಮಹತ್ವದ ಕಾಲುವೆಯನ್ನು ಒಡೆದಿರುವ ಅನಾಮಧೇಯ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.