ಪಾರ್ಟ್ ಟೈಮ್ ಜಾಬ್ ನಂಬಿ ಮಹಿಳೆ ಮೋಸ, ಹತ್ತು ಲಕ್ಷಕ್ಕೂ ಅಧಿಕ ರೂಪಾಯಿ ವಂಚನೆ, ಇಲ್ಲಿದೆ ಇಂಟ್ರೆಸ್ಟಿಂಗ್ ಕೇಸ್
ಸರಕಾರ ನ್ಯೂಸ್ ವಿಜಯಪುರ
ನಟರಾಜ ಪೆನ್ಸಿಲ್ ಪ್ಯಾಕಿಂಗ್ ಮಾಡುವ ಪಾರ್ಟ್ ಟೈಮ್ ಜಾಬ್ ನಂಬಿ ಮಹಿಳೆಯೋರ್ವಳು ಹತ್ತು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಅಥಣಿ ರಸ್ತೆಯಲ್ಲಿರುವ ಸೇನಾ ನಗರದ ನಿವಾಸಿ ಮೈತ್ರಾದೇವಿ ಭೂತಾಳಿ ಹುಡಿಮನಿ (27) ಎಂಬುವರು ಮೋಸಕ್ಕೆ ಒಳಗಾಗಿದ್ದಾರೆ. ಮೈತ್ರಾದೇವಿ ತಮ್ಮ ತಂದೆಯ ಮಲ್ಲಿಕಾರ್ಜುನ ಕಲ್ಯಾಣಪ್ಪ ಢವಳಾರ ಇವರ ಬ್ಯಾಂಕ್ ಖಾತೆ ನಿಭಾಯಿಸುತ್ತಿದ್ದು, ಗೂಗಲ್ ಪೇ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ.
2023 ಆ. 13 ರಂದು ಮಲ್ಲಿಕಾರ್ಜುನ ಡಿಕೆ ಎಂಬುವರ ಇನ್‌ಸ್ಟಾಗ್ರಾಂ ಖಾತೆ ತೆಗೆದಾಗ ಅದರಲ್ಲಿ ನಟರಾಜ್ ಪೆನ್ಸಿಲ್ ಪ್ಯಾಕಿಂಗ್ ಮಾಡುವ ಪಾರ್ಟ್ ಟೈಮ್ ಜಾಬ್ ಬಗ್ಗೆ ಇರುವ ಮಾಹಿತಿ ತಿಳಿದು ಆ ವಿಳಾಸಕ್ಕೆ ಪ್ರತಿಕ್ರಿಯಿಸಿದ್ದಾರೆ. ಮನೆಯಲ್ಲಿಯೇ ಕುಳಿತ ಪಾರ್ಟ್ ಟೈಮ್ ಜಾಬ್ ಮೂಲಕ ವಾರಕ್ಕೆ 15 ಸಾವಿರ ರೂಪಾಯಿ ಗಳಿಸಬಹುದೆಂಬ ಆಮಿಷಕ್ಕೆ ಒಳಗಾಗಿ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಹಾಗೂ ಫೋಟೊ ಮತ್ತಿತರ ಮಾಹಿತಿ ನೀಡಿದ್ದಾರೆ.
ಅದನ್ನಾಧರಿಸಿ ಕಿರಾತಕರು ಬ್ಯಾಂಕ್ ಖಾತೆಯಿಂದ 10,58,062 ರೂ.ತೆಗೆದಿದ್ದಾರೆ. ಬಳಿಕ ಜಾಬ್ ಕೊಡದೇ ಹಣವೂ ಕೊಡದೇ ಮೋಸ ಮಾಡಿದ್ದಾರೆ. ಕೊನೆಗೆ ಮೋಸದ ಅರಿವಾಗಿ ಮೈತ್ರಾದೇವಿ ಫೆ. 17 ರಂದು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)