ಮೌಲಾನಾ ಜೊತೆ ಅನೈತಿಕ ಸಂಬಂಧ ಆರೋಪ, ಮಡದಿಯನ್ನು ಕೊಂದ ಪತಿಗೆ ಕಠಿಣ ಜೀವಾವಧಿ ಶಿಕ್ಷೆ
ಸರಕಾರ್ ನ್ಯೂಸ್ ವಿಜಯಪುರ
ಮೌಲಾನಾಗಳ ಜೊತೆ ಅನೈತಿಕ ಸಂಬಂಧ ಹೊಂದಿರುವೆ ಎಂದು ಆರೋಪಿಸಿ, ಶೀಲ ಶಂಕಿಸಿ ಮಡದಿಯನ್ನು ಕೊಲೆ ಮಾಡಿದ್ದ ಅಪರಾಧಿಗೆ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.
ಸಿಂದಗಿ ತಾಲೂಕಿನ ಕಡಣಿ ಗ್ರಾಮದ ಅಬ್ದುಲ್ ಮೋರುಟಗಿ ಎಂಬಾತ ಶಿಕ್ಷೆಗೆ ಗುರಿಯಾಗಿದ್ದಾನೆ. ಈತ ತನ್ನ ಮಡದಿ ರಿಯಾನಾಳೊಂದಿಗೆ ಆಗಾಗ ಜಗಳ ಮಾಡುತ್ತಿದ್ದನು. ಕೌಟುಂಬಿಕ ಕಲಹದಿಂದ ಗಂಡನನ್ನು ಬಿಟ್ಟು ರಿಯಾನಾ ಇಂಡಿ ಪಟ್ಟಣದ ರೈಲ್ವೆ ಸ್ಟೇಶನ್ ಸಮೀಪ ಅಹಿರಂಗ ರಸ್ತೆಗೆ ಅಂಟಿಕೊಂಡಿರುವ ಮದರಸಾ ಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಮಾಡಿಕೊಡುವ ಕೆಲಸಕ್ಕೆ ಸೇರಿಕೊಂಡಿದ್ದಳು. ಅಲ್ಲಿಗೂ ಪದೇ ಪದೇ ಬಂದು ಜಗಳ ತೆಗೆಯುತ್ತಿದ್ದ ಅಬ್ದುಲ್ ಮದರಸಾದ ಮೌಲಾನಾಗಳೊಂದಿಗೆ ಅಕ್ರಮ ಸಂಬಂಧ ಹೊಂದಿರುವೆ ಎಂದು ಆಪಾದಿಸಿ ಹೊಡಿಬಡಿ ಮಾಡುತ್ತಿದ್ದನು.
2015ರ ಸೆ. 24ರಂದು ರಾತ್ರಿ 8 ರ ಸುಮಾರಿಗೆ ಅಬ್ದುಲ್ ರಿಯಾನಾಳನ್ನು ಕೊಡಲಿಯಿಂದ ತಲೆಗೆ ಹೊಡೆದಿದ್ದನು. ಗಾಯಗೊಂಡ ರಿಯಾನಾಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರಿಯಾನಾ ಮೃತಪಟ್ಟಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮದ್ವೇಶ ದಬೇರ ಅಬ್ದುಲ್ ಮೋರುಟಗಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಮಾಮನಿ ವಾದ ಮಂಡಿಸಿದ್ದರು.
(ಕ್ಷಣ ಕ್ಷಣ ದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)