ಪತ್ನಿಯ ಕೊಲೆಗೆ ಪ್ರಯತ್ನ; ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ
ಸರಕಾರ ನ್ಯೂಸ್ ವಿಜಯಪುರ
ಜಮೀನಿನ ವಿಷಯವಾಗಿ ಉಂಟಾದ ಕಲಹದಲ್ಲಿ ಮಹಿಳೆಯೊಬ್ಬಳಿಗೆ ಹೊಡೆದು ಕೊಲೆ ಮಾಡಲು ಯತ್ನಿಸಿದಾತನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಚನ್ನಪ್ಪ ಸಿದರಾಯ ಧೂಳಖೇಡ ಶಿಕ್ಷೆಗೆ ಗುರಿಯಾಗಿದ್ದಾನೆ. 2019 ಅ.26 ರಂದು ಚನ್ನಪ್ಪ ಸರುಬಾಯಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದನು. ಹಲ್ಲೆಗೊಳಗಾದ ಸರುಬಾಯಿ ಖುದ್ದು ಚನ್ನಪ್ಪನ ಪತ್ನಿಯೇ ಆಗಿದ್ದು, ಪರಸ್ಪರ ಕಲಹದ ಕಾರಣ ಪ್ರತ್ಯೇಕವಾಗಿ ವಾಸವಾಗಿದ್ದರು. ಸರುಬಾಯಿ ಮಕ್ಕಳೊಂದಿಗೆ ಪ್ರತ್ಯೇಕ ಜಮೀನಿನಲ್ಲಿ ಪತ್ರಾಸ್ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದು, ಅದರ ಪಕ್ಕದ ಜಮೀನಿನಲ್ಲಿಯೇ ಚನ್ನಪ್ಪ ವಾಸವಾಗಿದ್ದನು. ಸರುಬಾಯಿಯ ಎಮ್ಮೆ ತನ್ನ ಜಮೀನಿಗೆ ಬಂದಿದೆ ಎಂಬ ಕಾರಣಕ್ಕೆ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದನು.
ಈ ಬಗ್ಗೆ ಹೊರ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ ಚನ್ನಪ್ಪ ಸಿದರಾಯ ಧೂಳಖೇಡಗೆ ಶಿಕ್ಷೆಗೆ ಗುರಿಪಡಿಸಿದ್ದಾರೆ. ಸರ್ಕಾರದ ಪರವಾಗಿ ಎಸ್.ಎಚ್. ಹಕೀಮ್ ವಾದ ಮಂಡಿಸಿದ್ದರು.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)