ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ್ ಚರ್ಚೆ, ದೇಶದ್ರೋಹಿಗಳ ಮೇಲೆ ಕ್ರಮಕ್ಕೆ ಒತ್ತಾಯ
ಸರಕಾರ ನ್ಯೂಸ್ ವಿಜಯಪುರ
ವಿಧಾನ ಸೌಧದಲ್ಲಿ ಮೊಳಗಿದೆ ಎನ್ನಲಾದ ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಲ್ಲಿಯೂ ಬಿಸಿ ಬಿಸಿ ಚರ್ಚೆ ನಡೆಯಿತು !
ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಆರಂಭದಲ್ಲಿಯೇ ಬಿಜೆಪಿ ಸದಸ್ಯ ಶಿವರುದ್ರ ಬಾಗಲಕೋಟ ವಿಷಯ ಪ್ರಸ್ತಾಪಿಸುತ್ತಾ, ರಾಜ್ಯದ ರಾಜಧಾನಿಯಲ್ಲಿರುವ ಶಕ್ತಿ ಕೇಂದ್ರ ವಿಧಾನ ಸೌಧದಲ್ಲಿ ರಾಜ್ಯ ಸಭೆ ಚುನಾವಣೆ ಫಲಿತಾಂಶ ಪ್ರಕಟಣೆ ಬಳಿಕ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿ ಬಂದಿದೆ. ಇದೊಂದು ಆಘಾತಕಾರಿ ಸಂಗತಿ. ಹೀಗಾಗಿ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇನ್ನೋರ್ವ ಬಿಜೆಪಿ ಸದಸ್ಯ ರಾಜಶೇಖರ ಮಗಿಮಠ ಮಾತನಾಡಿ, ದೇಶದಲ್ಲಿ ಇಂಥ ಆಘಾತಕಾರಿ ಹೇಳಿಕೆ ಕಂಡುಬರುತ್ತಿರುವುದು ಖಂಡನೀಯ. ಹೀಗಾಗಿ ಸಭೆಯ ಆರಂಭದಲ್ಲಿಯೇ ಮಹಾಪೌರರು ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯೆ ಆರತಿ ಶಹಾಪುರ ಮಾತನಾಡಿ, ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಮೊಳಗಿರುವುದರ ಕುರಿತು ಇನ್ನೂ ಸ್ಪಷ್ಟತೆಯಿಲ್ಲ. ಈ ಬಗ್ಗೆ ತನಿಖೆ ಆಗಬೇಕು. ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಈಗಲೇ ನಿರ್ಣಯಕ್ಕೆ ಬರುವುದು ಸರಿಯಲ್ಲ ಎಂದರು.
ಕಾಂಗ್ರೆಸ್‌ನ ಇನ್ನುಳಿದ ಸದಸ್ಯರು ಸಹ ಆರತಿ ಶಹಾಪುರ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತಾ, ನಾವೆಲ್ಲ ಭಾರತೀಯರು. ಒಂದೇ ತಾಯಿ ಮಕ್ಕಳು. ಹೀಗಾಗಿ ಪಾಕ್ ಪರ ಘೋಷಣೆ ಸಹಿಸಲ್ಲ. ತನಿಖೆಯಲ್ಲಿರುವ ವಿಷಯದ ಒರ ಚರ್ಚೆ ಬೇಡ ಎಂದರು.
ಆಗ ಬಿಜೆಪಿ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಸಮರ್ಥನೆ ಬೇಡ. ತನಿಖೆ ತ್ವರಿತವಾಗಿ ಕೈಗಳ್ಳಲಿ ಎಂಬುದು ನಮ್ಮ ಆಗ್ರಹ. ಆ ಬಗ್ಗೆಯೇ ನಿರ್ಣಯ ಆಗಲಿ. ತ್ವರಿತವಾಗಿ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕ್ರಮ ಆಗಲಿ ಎಂಬುದು ನಮ್ಮ ಆಗ್ರಹ ಎಂದರು.