Uncategorized

ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಿ, ಸಂಸದ ರಮೇಶ ಜಿಗಜಿಣಗಿ ಆಕ್ರೋಶ

ಸರಕಾರ‌ ನ್ಯೂಸ್ ವಿಜಯಪುರ

ತಮ್ಮನ್ನು ಲಿಂಗಾಯತ ವಿರೋಧಿ ಎಂದು ಹೇಳಿದರ ನಾಲಿಗೆ ಕತ್ತರಿಸಬೇಕೆಂದು ಸಂಸದ ರಮೇಶ ಜಿಗಜಿಣಗಿ ತೀವ್ರ ಆಕ್ರೋಶ ಹೊರಹಾಕಿದರು.

ರಾಜಕಾರಣದಲ್ಲಿ 45-50 ವರ್ಷ ಸಕ್ರಿಯವಾಗಿದ್ದೇನೆಂದರೆ ಅದಕ್ಕೆ ಬ್ರಾಹ್ಮಣ, ಲಿಂಗಾಯತ ಮತ್ತಿತರ ಮೇಲ್ವರ್ಗದ ಸಹಕಾರವೇ ಕಾರಣ. ಅಂಥವರ ವಿರೋಧಿ ಎಂದು ಬಿಂಬಿಸಲು ಹೊರಟಿಸುವವರ ನಾಲಿಗೆ ಕತ್ತರಿಸಬೇಕೆಂದು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ನನ್ನ ಜೀವನದಲ್ಲಿಯೇ ನನಗೆ ಜಾತಿ ಎಂಬುದು ಗೊತ್ತಿಲ್ಲ. ಲಿಂಗಾಯತ ವಿರೋಧಿಯಾಗಿದ್ದರೆ, ದಲಿತರನ್ನು ಕೊರಳಿಗೆ ಕಟ್ಟಿಕೊಂಡಿದ್ದರೆ ಇಷ್ಟು ವರ್ಷ ರಾಜಕಾರಣದಲ್ಲಿ ಇರುತ್ತಿರಲಿಲ್ಲ. ಯಾರೊಬ್ಬರೂ ಯಾವುದೋ ಒಂದು ಸಮಾಜದಿಂದ ಮಾತ್ರ ರಾಜಕಾರಣ ಮಾಡಲಾಗಲ್ಲ. ಎಲ್ಲ ಸಮಾಜಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೆ ಮಾತ್ರ ರಾಜಕಾರಣವಾಗುತ್ತದೆ. ಹಾಗೆ ನಡೆದುಕೊಂಡಿದ್ದರಿಂದಲೇ 12 ಚುನಾವಣೆಗಳನ್ನು ಎದುರಿಸಿ 11 ಚುನಾವಣೆ ಗೆದ್ದಿದ್ದೇನೆ. ಯಾವುದೋ ಒಂದು ಸಮುದಾಯವನ್ನು ವಿರೋಧ ಕಟ್ಟಿಕೊಂಡು ಇನ್ನೊಂದು ಸಮಾಜವನ್ನು ಕೊರಳಿಗೆ ಕಟ್ಟಿಕೊಂಡು ಹೋಗಿದ್ದರೆ ಇಷ್ಟೆಲ್ಲಾ ಸಾಧ್ಯವಿತ್ತಾ? ಕ್ಷೇತ್ರ ಬಿಟ್ಟು ಕ್ಷೇತ್ರಕ್ಕೆ ಹೋದರೂ ಲಿಂಗಾಯತ ಜನ ನನ್ನ ಕೈ ಬಿಟ್ಟಿಲ್ಲ. ಹೀಗಾಗಿ ಮೇಲ್ವರ್ಗದ ಜೊತೆ ಹೇಗಿರಬೇಕೆಂದು ನನ್ನ ನಿವೃತ್ತಿಯೊಳಗಾಗಿ ದಲಿತ ಸಮುದಾಯಕ್ಕೆ ಸಂದೇಶ ನೀಡಲಿದ್ದೇನೆ ಎಂದರು.

ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದರೆ ಯಾರೋ ಜಡ್ಡು ಹತ್ತಿದೆ ಎಂದು ಟೀಕಿಸಿದರು. ಇರಲಿ ಅವರವರ ಮನಸ್ಸಿಗೆ ಬಂದಂತೆ ಮಾತನಾಡಲಿ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದ ಜಿಗಜಿಣಗಿ, ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದಾಗ ಇಡೀ ರಾಜ್ಯದ ಎಲ್ಲ ವರ್ಗದ ಜನ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಅದರಲ್ಲಿ ಯಾರೂ ದಲಿತರಿರಲಿಲ್ಲ; ಎಲ್ಲರೂ ಮೇಲ್ವರ್ಗದವರೇ ಆಗಿದ್ದರು. ಅವರಿಗೆಲ್ಲ ನಾನು ವಿಧೇಯನಾಗಿದ್ದೇನೆ ಎಂದರು.

ನನ್ನ ರಾಜಕಾರಣಕ್ಕೆ ಅಡ್ಡ ಬಂದವರು ಯಾರೂ ಉಳಿದಿಲ್ಲ, ಯಾರೂ ಉಳಿಯಂಗಿಲ್ಲ, ದೇವರೇ ಖಲಾಸ್ ಮಾಡುತ್ತಾನೆ. ನನ್ನ ಬಿಟ್ಟು ಯಾರಿಗೂ ಟಿಕೆಟ್ ಕೊಡಲ್ಲ ಎಂದು ಹೈಕಮಾಂಡ್ ಹೇಳಿದೆ. ಅನಾರೋಗ್ಯವಾದರೂ ಸರಿ, ಕೊನೆಗೆ ಸತ್ತರೂ ಜನ ನಿನ್ನ ಹೆಣಕ್ಕೆ ಮತಹಾಕಲಿ ಎಂದಿದ್ದಾರೆ. ಹೀಗಾಗಿ ನಾನೇ ಸ್ಪರ್ಧಿಸುವುದು ನಿಶ್ಚಿತ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಜಿಲ್ಲಾ ಉಪಾಧ್ಯಕ್ಷ ಉಮೇಶ ಕೋಳಕೂರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಪ ಮಾಜಿ ಸದಸ್ಯ ಅರುಣ ಶಹಾಪುರ, ಸುರೇಶ ಬಿರಾದಾರ, ಸಂಜಯ ಪಾಟೀಲ ಕನಮಡಿ ಮತ್ತಿತರರಿದ್ದರು.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!