ಹುಶಾರ್ !!! ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿದೆ ಗ್ಯಾಂಗ್, ಸಚಿವ ಎಂ.ಬಿ. ಪಾಟೀಲ ಬಿಚ್ಚಿಟ್ಟ ಬೆಚ್ಚಿ ಬೀಳಿಸುವ ವಂಚನೆ ಪ್ರಕರಣ…..ಏನಿದು ಜಾಲ….ಇಲ್ಲಿದೆ ಡಿಟೇಲ್ಸ್
ಸರಕಾರ ನ್ಯೂಸ್ ವಿಜಯಪುರ
ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಕೆ ಪ್ರಕರಣಗಳು ಕಂಡು ಬರುತ್ತಿದ್ದು, ಮೂಲ ಮಾಲೀಕರ ಗಮನಕ್ಕೆ ಬಾರದಂತೆ ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ ಮಾಡುವುದು, ಮಧ್ಯವರ್ತಿಗಳ ಮೂಲಕ ರಾಜಿ-ಸಂಧಾನಕ್ಕೆ ಕರೆದು ಅಕ್ರಮವಾಗಿ ಹಣ ಮಾಡುವ ದಂಧೆ ಕಂಡು ಬಂದಿದೆ. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಡಿ. 13 ರಂದು ಬೆಳಗಾವಿಯಲ್ಲಿ ನಡೆಯಲಿಸುವ ವಿಶೇಷ ಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಈಗಾಗಲೇ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ವಿಜಯಪುರ ನಗರವೊಂದರಲ್ಲೇ ಕಳೆದ ಐದು ವರ್ಷಗಳಲ್ಲಿ 13 ಪ್ರಕರಣಗಳು ಕಂಡು ಬಂದಿವೆ. ನೆರೆ ಜಿಲ್ಲೆ ಹಾಗೂ ರಾಜ್ಯದಲ್ಲೂ ಇಂಥ ದಂಧೆಕೋರರ ಜಾಲ ಹರಡಿದೆ. ಹೀಗಾಗಿ ಮಾಹಿತಿ ಕಲೆ ಹಾಕಿ ದಂಧೆಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
ಬಹಳ ವರ್ಷಗಳಿಂದ ಕೆಲವೊಂದು ವ್ಯಕ್ತಿ ಹಾಗೂ ಗ್ಯಾಂಗ್‌ಗಳು ಇಂಥ ಕೃತ್ಯದಲ್ಲಿ ತೊಡಗಿಸಿಕೊಂಡಿವೆ. ಆಧಾರ್, ಪ್ಯಾನ್ ಕಾರ್ಡ್‌ಗಳನ್ನು ಖೊಟ್ಟಿಯಾಗಿ ಸಿದ್ಧಪಡಿಸಿ ಆಸ್ತಿ ಖರೀದಿ ಮತ್ತು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಬಾಂಡ್ ರೈಟರ್ಸ್ ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳ ಸಹಿತ ಅಧಿಕಾರಿಗಳ ಕೈವಾಡವೂ ಇದೆ. ತಾವೇ ಭೂ ಮಾಲೀಕರೆಂಬಂತೆ ದಾಖಲೆ ಸೃಷ್ಠಿಸಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿ ಮಾರಾಟ ಮಾಡುವು ದಂಧೆ ಇದಾಗಿದ್ದು, ಮಧ್ಯವರ್ತಿಗಳ ಮೂಲಕ ರಾಜಿ ಸಂಧಾನಕ್ಕೆ ಕರೆದು ಹಣ ದೋಚುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದೆ ಎಂದ ಸಚಿವ ಎಂ.ಬಿ. ಪಾಟೀಲ ತಮ್ಮದೇ ಕ್ಷೇತ್ರದ ಬಾಲಪ್ಪ ಹಣಮಪ್ಪ ಪಡೇಕನೂರ ರೆಡ್ಡಿ ಎಂಬಾತ ವಿಕ್ರಮ ಯಲ್ಲಪ್ಪ ಸುರಪುರ ಎಂಬುವರ ಜಮೀನು ಖೊಟ್ಟಿ ದಾಖಲೆ ಸೃಷ್ಠಿಸಿ ತನ್ನದಾಗಿಸಿಕೊಂಡಿರುವುದನ್ನು ಉದಾಹರಿಸಿದರು.
ನೋಡಲ್ ಅಧಿಕಾರಿ ನೇಮಕ:
ಅನೇಕ ಪ್ರಕರಣಗಳಲ್ಲಿ ನಡೆದ ಅಕ್ರಮದ ಕುರಿತು ಮಾಹಿತಿ ಸಂಗ್ರಹಿಸಲು ವಾರದ ಗಡುವು ನೀಡಲಾಗಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೊಂದಿಗೂ ಚರ್ಚಿಸಲಾಗುತ್ತಿದೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಡಿ.13 ರಂದು ನಡೆಯಲಿರುವ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದರು.
ಕಾವೇರಿ 2.0 ತಂತ್ರಾಂಶ ಸಮರ್ಪಕವಾಗಿ ಅನುಷ್ಟಾನವಾಗುವವರೆಗೂ ದಾಖಲೆ ಪರಿಶೀಲನೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಜಿಲ್ಲಾ ಉಪ ನೋಂದಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾದರೆ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆಗೆ ಗಂಭೀರತೆ ಬರಲಿದೆ ಎಂಬ ಕಾರಣಕ್ಕೆ ಜಿಲ್ಲಾ ಮಟ್ಟದಲ್ಲಿಯೇ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗುತ್ತಿದೆ. ಮತದಾರ ಚೀಟಿ ಹಾಗೂ ಪಡಿತರ ಚೀಟಿ ಕೂಡ ಪರಿಶೀಲನೆಗೆ ಲಾಗಿನ್ ಕೊಡಲಾಗುತ್ತಿದ್ದು ಇದರಿಂದ ಅಕ್ರಮ ದಂಧೆಕೋರರು ಸಿಕ್ಕಿ ಬೀಳಲಿದ್ದಾರೆ. ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಪರಿಶೀಲಿಸಿ ಸಿಂಧುಗೊಳಿಸಲು ಅಧಿಕಾರಿ ಅಥವಾ ಸಿಬ್ಬಂದಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಡಲ್ ಅಧಿಕಾರಿ ನೇಮಿಸಲಾಗುತ್ತಿದೆ. ತಹಸೀಲ್ದಾರ್ ಕೂಡ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕಮೀಷನರ್ ಕಚೇರಿಯಲ್ಲೂ ದಾಖಲೆ ಪರಿಶೀಲಿಸಲು ಸಭೆಯಲ್ಲಿ ಸೂಚಿಸಲಾಗಿದೆ. ಸಭೆಯ ನಡಾವಳಿ ಆಧರಿಸಿ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಒಪ್ಪಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್‌ಪಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮತ್ತಿತರರಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)