ವಿಜಯಪುರದಲ್ಲಿದ್ದಾರಾ ಬಾಂಗ್ಲಾ-ಪಾಕ್ ವಲಸಿಗರು, ಸಿಮಿ-ಪಿಎಫ್‌ಐ ಕಾರ್ಯಕರ್ತರ ಮೇಲಿದೆಯಾ ನಿಗಾ?
ಸರಕಾರ ನ್ಯೂಸ್ ಬೆಂಗಳೂರ
ಐತಿಹಾಸಿಕ ಗುಮ್ಮಟ ನಗರಿಯಲ್ಲಿ ನಿಷೇಧಿತ ಸಿಮಿ ಹಾಗೂ ಪಿಎಫ್‌ಐ ಕಾರ್ಯಕರ್ತರಿದ್ದಾರಾ? ನೆರೆಯ ಪಾಕಿಸ್ತಾನ-ಬಾಂಗ್ಲಾದೇಶದಿಂದ ವಲಸೆ ಬಂದವರು ನೆಲೆಸಿದ್ದಾರಾ? ಇವರ ಮೇಲೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ?
ಹೀಗೊಂದು ಪ್ರಶ್ನೆ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಂದ ಕೇಳಲ್ಪಟ್ಟಿದ್ದು ಸರ್ಕಾರ ಮಾತ್ರ ಅಂಥ ಯಾವುದೇ ಪ್ರಕರಣಗಳು ಈವರೆಗೆ ಕಂಡು ಬಂದಿಲ್ಲವೆಂದು ಉತ್ತರಿಸಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ಯತ್ನಾಳ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ ಉತ್ತರ ಒದಗಿಸಿದ್ದು, ಈವರೆಗೆ ಸಿಮಿ ಹಾಗೂ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಸಕ್ರಿಯವಾಗಿರುವುದು ಕಂಡು ಬಂದಿಲ್ಲ. ಅದಾಗ್ಯೂ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ.ನೆರೆಯ ಬಾಂಗ್ಲಾ ಹಾಗೂ ಪಾಕಿಸ್ತಾನದಿಂದ ವಲಸೆ ಬಂದವರು ಸಹ ಯಾರೂ ಇಲ್ಲ ಎಂದಿದ್ದಾರೆ.
ಇನ್ನು ಕಂಟ್ರಿ ಪಿಸ್ತೂಲ್‌ಗಳು ಅಕ್ರಮವಾಗಿ ಮಾರಾಟ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯತ್ನಾಳರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹೊಂದಿದವರ ಮೇಲೆ ದಾಖಲಾದ ಪ್ರಕರಣಗಳ ವಿವರ ನೀಡಿದ್ದು, 2021ರಲ್ಲಿ 4, 2022 ಹಾಗೂ 2023ರಲ್ಲಿ ತಲಾ ಮೂರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. ಮುಂದುವರಿದು ವಿಜಯಪುರದಲ್ಲಿ ಕಂಟ್ರಿ ಪಿಸ್ತೂಲ್ ದಾಸ್ತಾನು ಆಗಲಿ ತಯಾರಿಕೆ ಘಟಕವಾಗಲಿ ಇಲ್ಲ ಎಂದಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)