ಕಲಬುರಗಿಯ ಬಿಜೆಪಿ ವಿರಾಟ ಸಮಾವೇಶಕ್ಕೆ ಕಂಟಕ, ಸಿಎಂ ಬೊಮ್ಮಾಯಿಗೆ ತಟ್ಟಲಿದೆಯಾ ಎಸ್‌ಟಿ ಬಿಸಿ?
ಸರಕಾರ್ ನ್ಯೂಸ್ ಕಲಬುರಗಿ
ಕಲಬುರಗಿಯಲ್ಲಿ ಅ. 30ರಂದು ನಡೆಯಲಿರುವ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವಿರಾಟ ಸಮಾವೇಶ ಹಾಗೂ ಹಿಂದುಳಿದ ವರ್ಗಗಳ ಜನಜಾಗೃತಿ ಸಮಾವೇಶಕ್ಕೆ ಕಂಟಕ ಎದುರಾಗಿದೆ !
ಹೌದು, ಈಗಾಗಲೇ ಒಂದು ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಕಪ್ಪು ಬಟ್ಟೆ ಪ್ರದರ್ಶನದ ಹೋರಾಟ ಎದುರಿಸಿದ್ದು, ಇದೀಗ ಮತ್ತೊಮ್ಮೆ ಅಂಥದ್ದೇ ಮುಜುಗರಕ್ಕೆ ಒಳಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಹಲವು ಸಂಘಟನೆಗಳು ಹೋರಾಟಕ್ಕೆ ಕರೆ ಕೊಟ್ಟಿವೆ.
ಏನಿದು ಹೋರಾಟ?
ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಅಧಿಸೂಚನೆ ಪ್ರಕಟಿಸಿದೆ. ಆದರೆ, ರಾಜ್ಯ ಸರ್ಕಾರ ಗೊಂದಲಕಾರಿ ಸುತ್ತೋಲೆ ಹೊರಡಿಸಿ ಎಸ್‌ಟಿ ಜಾತಿ ಪ್ರಮಾಣ ಪತ್ರ ಸುರುಳಿತವಾಗಿ ಕೈ ಸೇರದಂತೆ ಕುತಂತ್ರ ಹೆಣೆಯಿತು. ಸಿಂದಗಿ ವಿಧಾನ ಸಭೆ ಉಪ ಚುನಾವಣೆ ಸಂದರ್ಭದಲ್ಲಿ ತಳವಾರ ಸಮುದಾಯಕ್ಕೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡುವ ವಿಷಯವನ್ನೇ ಮುಂದಿಟ್ಟುಕೊಂಡು ಅದನ್ನೇ ಪಕ್ಷದ ಪ್ರಮುಖ ಅಜೆಂಡಾ ಮಾಡಿಕೊಂಡು ಗೆಲುವು ಸಾಧಿಸಿತು. ಆದರೆ, ಚುನಾವಣೆ ಬಳಿಕ ಆ ಬಗ್ಗೆ ಕಾಟಾಚಾರದ ಸುತ್ತೋಲೆ ಹೊರಡಿಸಿದ್ದು ಬಿಟ್ಟರೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿಲ್ಲ. ಹೀಗಾಗಿ ತಳವಾರ ಮತ್ತು ಪರಿವಾರ ಸಮುದಾಯದ ಕೆಂಗೆಣ್ಣಿಗೆ ಗುರಿಯಾಗಬೇಕಾಯಿತು. ಅಲ್ಲದೇ, ಆ ಸಮುದಾಯದ ಜನ ನ್ಯಾಯಾಲದ ಮೆಟ್ಟಿಲೇರುವಂತೆ ಮಾಡಿದ್ದು ತೀವ್ರ ಆಕ್ರೋಶಕ್ಕೂ ಕಾರಣವಾಯಿತು.
ಕಪ್ಪು ಬಟ್ಟೆ ಪ್ರದರ್ಶನ:
ಇತ್ತೀಚೆಗಷ್ಟೇ ಕಲ್ಯಾಣ ಕರ್ನಾಟಕದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ತಳವಾರ ಮತ್ತು ಪರಿವಾರ ಸಮುದಾಯದ ಜನ ಕಪ್ಪು ಬಟ್ಟೆ ತೋರಿಸಿ ಉಗ್ರ ಹೋರಾಟ ನಡೆಸಿದ್ದರು. ಘಟನೆಯಿಂದ ಮುಜುಗರಕ್ಕೆ ಒಳಗಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಭಾಷಣವನ್ನೂ ಮಾಡದೆ ಪಲಾಯಾನಗೊಂಡಿದ್ದರು. ಇದೀಗ. ಅ. 30ರಂದು ಅದೇ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಮತ್ತಷ್ಟು ಬಿಸಿ ಮುಟ್ಟಿಸಲು ಎರಡೂ ಸಮುದಾಯಗಳು ಸಜ್ಜಾಗಿವೆ. ಈಗಾಗಲೇ ಸಾಕಷ್ಟು ಪೂರ್ವಭಾವಿ ಸಭೆ ನಡೆಸಿದ್ದಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕವೂ ಹೋರಾಟಕ್ಕೆ ಕರೆ ಕೊಡುತ್ತಿವೆ.
ಸಿಹಿ ಸುದ್ದಿಯ ಭರವಸೆ:
ಈ ಮಧ್ಯೆ ಬಿಜೆಪಿಯ ಕೆಲವು ನಾಯಕರು ತಳವಾರ ಮತ್ತು ಪರಿವಾರ ಸಮುದಾಯಕ್ಕೆ ದೀಪಾವಳಿಗೆ ಸಿಹಿ ಸುದ್ದಿ ನೀಡಿದ್ದೇವೆ. ಕ್ಯಾಬಿನೆಟ್‌ನಲ್ಲಿ ತಳವಾರ-ಪರಿವಾರ ಸಮುದಾಯದ ಗೊಂದಲ ಬಗೆ ಹರಿಸಲಾಗಿದೆ. ಹೀಗಾಗಿ ಪಟಾಕಿ ಹೊಡೆದು ಸಂಭ್ರಮಾಚರಿಸಿ ಎಂದು ಕರೆ ಕೊಟ್ಟಿದ್ದಾರೆಂಬ ಸುದ್ದಿ ಮತ್ತಷ್ಟು ಸದ್ದು ಮಾಡುತ್ತಿದೆ. ಕಲಬುರಗಿಯ ಸಮಾವೇಶಕ್ಕೂ ಮೊದಲೇ ತಳವಾರ ಮತ್ತು ಪರಿವಾರ ಸಮುದಾಯವನ್ನು ಪ್ರವರ್ಗ-1ರಿಂದ ಅಳಿಸಲಾಗುವುದೆಂಬ ಮಾಹಿತಿ ಹರಿದಾಡುತ್ತಿದೆ. ಆದರೆ, ಈಗಾಗಲೇ ಸಾಕಷ್ಟು ಬಾರಿ ಸುಳ್ಳು ಭರವಸೆಗಳಿಂದ ಬೇಸತ್ತು ಸಮುದಾಯದ ಜನ ಶತಾಯಗತಾಯ ಈ ಮಾಹಿತಿಯನ್ನು ಅಲ್ಲಗಳೆಯುತ್ತಿದ್ದು, ಕಲಬುರಗಿ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿಗೆ ಘೇರಾವ್ ಹಾಕಿಯೇ ಸಿದ್ದ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ನ್ಯಾಯಯುತವಾಗಿ ಸಿಕ್ಕಿರುವ ಎಸ್‌ಟಿ ಪ್ರಮಾಣ ಪತ್ರದ ವಿಚಾರ ಕೇಂದ್ರ ಸರ್ಕಾರ ಕೊಟ್ಟರೂ ರಾಜ್ಯ ಸರ್ಕಾರ ಕೊಡದೇ ಇರುವುದು ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತಾಗಿದೆ. ಇದಕ್ಕೆ ಮುಂಬರುವ ವಿಧಾನ ಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪ್ರತಿಫಲ ಉಣ್ಣಬೇಕಾಗುತ್ತದೆ ಎಂಬುದು ಆ ಸಮುದಾಯದ ಆಕ್ರೋಶ ಭರಿತ ಮಾತು.