ಬಿಜೆಪಿ ವಿರುದ್ಧ ಭುಗಿಲೆದ್ದ ಆಕ್ರೋಶ, ಪ್ರವರ್ಗ-1ರಿಂದ ಅಳಿಸಿ ಎಸ್‌ಟಿ ಪ್ರಮಾಣ ಪತ್ರ ಕೊಡಿಸಿ, ಅಫಜಲಪುರದಿಂದ ಸಂದೇಶ ರವಾನೆ !
ಸರಕಾರ್ ನ್ಯೂಸ್ ಅಫಜಲಪುರ
ವಿಧಾನ ಸಭೆ ಚುನಾವಣೆ ಹೊಸ್ತಿಲಲ್ಲಿಯೇ ಹಿಂದುಳಿದ ವರ್ಗಗಳ ಮತ ಬುಟ್ಟಿಗೆ ಕೈಹಾಕಿರುವ ಬಿಜೆಪಿಗೆ ತಳವಾರ ಎಸ್ ಟಿ ಪ್ರಮಾಣದ ವಿಷಯ ಚೇಳು ಕುಟುಕಿದಂತಾಗಿದೆ !
ಹೌದು, ಅ. 30 ರಂದು ಕಲಬುರಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಒಬಿಸಿ ಮೋರ್ಚಾ ಸಮಾವೇಶಕ್ಕೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೇ ರಾಜ್ಯಾದ್ಯಂತ ತಳವಾರ ಸಮುದಾಯದ ಆಕ್ರೋಶ ಭುಗಿಲೆದ್ದಿದೆ.
ಶನಿವಾರ ಅಫಜಲಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ತಳವಾರ ಸಮಾಜದ ಹಿತರಕ್ಷಣಾ ಸಮಿತಿ ಅಫಜಲಪುರ ಘಟಕದ ಮುಖಂಡರು, ತಳವಾರ ಮತ್ತು ಪರಿವಾರ ಸಮುದಾಯವನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಅಧಿಸೂಚನೆ ಪ್ರಕಟಗೊಳಿಸಿರುವುದು ಈಗ ಹಳೆಯ ವಿಷಯ. ಆದರೆ, ರಾಜ್ಯ ಸರ್ಕಾರದ ಅಸ್ಪಷ್ಟ ನಿರ್ಧಾರದಿಂದಾಗಿ ಈವರೆಗೂ ಅರ್ಹ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್‌ಟಿ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಕಾರಣ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಈ ವಿಷಯದಲ್ಲಿರುವ ಗೊಂದಲವಿದೆ. ಕೂಡಲೇ ಸರ್ಕಾರ ಈ ಗೊಂದಲ ಬಗೆ ಹರಿಸಬೇಕೆಂದು ಒತ್ತಾಯಿಸಿದರು.
ಏನಿದು ಗೊಂದಲ?
ತಳವಾರ ಸಮುದಾಯ ಮೂಲತಃ ಗ್ರಾಮದ ತಳವಾರಿಕೆ ಮಾಡಿಕೊಂಡು ಬಂದ ಸಮಾಜ. ಗ್ರಾಮದ ಕಾವಲುಗಾರರಾಗಿ ಕೆಲಸ ಮಾಡಿಕೊಂಡು ಬಂದ ಈ ಸಮಾಜ ಒಂದರ್ಥದಲ್ಲಿ ಆಧುನಿಕ ಪೊಲೀಸ್ ವ್ಯವಸ್ಥೆಯ ಥರ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈ ಬಗ್ಗೆ ಸಾಕಷ್ಟು ಕುರುಹುಗಳು ಈಗಲೂ ನೋಡಲು ಸಿಗುತ್ತವೆ. ಕೇಂದ್ರ ಸರ್ಕಾರವೇ ಮಾಡಿಸಿದ ಕುಲಶಾಸ್ತ್ರೀಯ ಅಧ್ಯಯನದ ಪ್ರಕಾರ ತಳವಾರ ಸಮುದಾಯ ಬೇಟೆಯಾಡಿಕೊಂಡು, ಗ್ರಾಮದ ಕಾವಲುಗಾರಿಕೆ ಮಾಡಿಕೊಂಡು ಬಂದಿರುವುದಾಗಿ ತಿಳಿಸಲಾಗಿದೆ.
ಈಗಲೂ ತಳವಾರ ಸಮುದಾಯ ಆಯುಧ ಹಿಡಿದು ಹಬ್ಬ ಹರಿದಿನಗಳನ್ನು ಆಚರಿಸುತ್ತಿರುವುದನ್ನು ಕಾಣಬಹುದು. ಆದರೆ, ಗೊಂದಲವೇನೆಂದರೆ ತಳವಾರ ಸಮುದಾಯವನ್ನು ಕೋಲಿ, ಕಬ್ಬಲಿಗ, ಗಂಗಾಮತ, ಅಂಬಿಗ ಮುಂತಾದ ಸಮುದಾಯಗಳೊಂದಿಗೆ ಥಳಕು ಹಾಕಿ ನೈಜ ತಳವಾರರಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಆ ಸಮುದಾಯಗಳಿಗೂ ತಳವಾರರಿಗೂ ಸಂಬಂಧವಿಲ್ಲ
ಎಂಬುದನ್ನು ಸರ್ವರೂ ಅರಿತುಕೊಳ್ಳಬೇಕು ಎಂದರು.
ದಿಕ್ಕು ತಪ್ಪಿಸುವ ಯತ್ನ:
ಕೆಲವು ರಾಜಕೀಯ ನಾಯಕರು ಮತ್ತು ಇನ್ನುಳಿದ ಸಮುದಾಯಗಳ ಮುಖಂಡರು ಸರ್ಕಾರದ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆ. ಮಾತ್ರವಲ್ಲ ತಳವಾರ ಸಮುದಾಯದ ಎಸ್‌ಟಿ ಪ್ರಮಾಣ ಪತ್ರದ ವಿಷಯವನ್ನು ತಮ್ಮ ರಾಜಕೀಯಕ್ಕೋಸ್ಕರ ಬಳಸಿಕೊಳ್ಳುವ ಯತ್ನ ನಡೆಸಿದ್ದಾರೆ. ಇನ್ನೂ ಕೆಲವರು ತಳವಾರ ಸಮಾಜದ ಎಸ್‌ಟಿ ಪ್ರಮಾಣ ಪತ್ರದ ವಿಷಯ ಇಟ್ಟುಕೊಂಡು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಸರ್ಕಾರವನ್ನು ಕೆರಳಿಸುವುದು, ಅಧಿಕಾರಿಗಳ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದು ದುರಂತ ಸಂಗತಿ. ಆದರೆ ಸರ್ಕಾರ ಇದಕ್ಕೆ ಕಿವಿಗೊಡಬಾರದು. ಇನ್ಮುಂದೆ ಯಾರೇ ಆಗಲಿ ತಳವಾರ ಸಮುದಾಯದ ಬಗ್ಗೆ ಹೇಳಿಕೆ ನೀಡುವ ಮುನ್ನ ಅಂಥ ನಾಯಕರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಬಹಿರಂಗಪಡಿಸಿ ಮಾತನಾಡಬೇಕು. ಇಲ್ಲವಾದಲ್ಲಿ ಅಂಥವರ ವಿರುದ್ಧ ಸಮಾಜ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಬೇಕಾಗುತ್ತದೆ.
ಸರ್ಕಾರಕ್ಕೆ ಸಂದೇಶ:
ತಳವಾರ ಸಮಾಜದ ನೈಜ ಫಲಾನುಭವಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಸರ್ಕಾರ ಸಿಂದಗಿ ವಿಧಾನ ಸಭೆ ಚುನಾವಣೆ ಬಳಿಕ ಸ್ಪಷ್ಟ ಸುತ್ತೋಲೆ ಹೊರಡಿಸಿದೆ. ಅದರಲ್ಲಿ ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದಗಳಾದ ತಳವಾರ ಮತ್ತು ಪರಿವಾರ ಸಮುದಾಯದ ನೈಜ ಫಲಾನುಭವಿಗಳಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಉಲ್ಲೇಖಿಸಲಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಇನ್ನೂ ಹಳೇಯ ಸುತ್ತೋಲೆಯನ್ನೇ ಆಧರಿಸಿ, ಸ್ಥಾನಿಕ ಚೌಕಾಸಿ ಮಾಡದೇ, ದಾಖಲೆಗಳನ್ನು ಪರಿಶೀಲಿಸದೆ ಕಚೇರಿಯಲ್ಲಿ ಕುಳಿತೇ ಅರ್ಹರಿದ್ದರೂ ತಳವಾರ ಸಮುದಾಯಕ್ಕೆ ಸೇರಿಲ್ಲ ಎಂದು ಅರ್ಜಿ ತಿರಸ್ಕರಿಸುತ್ತಿದ್ದಾರೆ. ಆದರೆ, ತಳವಾರ ಸಮುದಾಯಕ್ಕೆ ಸೇರಿಲ್ಲ ಎಂಬುದಕ್ಕೆ ಏನಾದರೂ ಸ್ಪಷ್ಟ ದಾಖಲೆಗಳಿವೆಯೇ ಎಂದರೆ ನಿರುತ್ತರರಾಗುತ್ತಾರೆ. ಇದರಿಂದ ಶೋಷಿತ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಇದರಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ದುರುದ್ದೇಶ ಎದ್ದು ಕಾಣುತ್ತಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೆ ತಂದರೂ ಮೌನ ಮುರಿದು ಕ್ರಮ ಕೈಗೊಳ್ಳದಿರುವುದು ಈ ಸಮಾಜಕ್ಕೆ ಮಾಡುತ್ತಿರುವ ಮಹಾಮೋಸ ಎಂದರು.
ಒಬಿಸಿ ಸಮಾವೇಶ ಬಹಿಷ್ಕಾರ:
ತಳವಾರ ಎಂಬ ಪದವನ್ನು ಪ್ರವರ್ಗ -1 ರಲ್ಲೂ ಮತ್ತೆ ಪರಿಶಿಷ್ಟ ಪಂಗಡ ಕಾಲಂ ನಲ್ಲೂ ಇರಿಸಲಾಗಿದೆ. ಇದು ಸಹ ಗೊಂದಲಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಪ್ರವರ್ಗ-1ರಿಂದ ಹಿಂದು ತಳವಾರ ಎಂಬ ಪದ ಅಳಿಸಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು ಇನ್ಮುಂದೆ ತಳವಾರ ಸಮುದಾಯ ಎಸ್ ಟಿ ಪ್ರಮಾಣ ಪತ್ರದ ಸಮಸ್ಯೆ ಇರುವುದಿಲ್ಲ, ಹೀಗಾಗಿ ವಿಜಯೋತ್ಸವ ಆಚರಿಸಿ ಎಂದು ಕೆಲವು ಬಿಜೆಇ ಮುಖಂಡರು ಹೇಳುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ಈವರೆಗೂ ಆ ಬಗ್ಗೆ ಸ್ಪಷ್ಟತೆ ಇಲ್ಲ. ಇದೊಂದು
ರಾಜಕೀಯ ಗಿಮಿಕ್ ಎನ್ನಿಸದೇ ಇರದು.
ಅ. 30ರಂದು ಕಲಬುರಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಒಬಿಸಿ ಸಮಾವೇಶಕ್ಕೆ ತಳವಾರ ಸಮುದಾಯ ಬಹಿಷ್ಕಾರ ಹಾಕಲು ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಪ್ರತಿ ಹಳ್ಳಿಗೂ ಭೇಟಿ ನೀಡಿ ಜನಜಾಗೃತಿ ಮೂಡಿಸಲಾಗಿದೆ. ಇದರಿಂದ ಭಯಗೊಂಡ ಬಿಜೆಪಿ ಪ್ರವರ್ಗ-1ರಿಂದ ಹಿಂದು ತಳವಾರ ಪದ ಅಳಿಸಲಾಗಿದೆ ಎಂಬ ಸಬೂಬು ಹೇಳುತ್ತಿದೆ ಎಂಬ ಅನುಮಾನ ಹೆಚ್ಚಿದೆ. ಏಕೆಂದರೆ ಈ ಹಿಂದೆಯೂ ಸಿಂದಗಿ ಉಪಚುನಾವಣೆ ವೇಳೆ ಇಂಥದ್ದೇ ಗಿಮಿಕ್ ಮಾಡಿ ತಳವಾರ ಸಮುದಾಯದ ಮತ ಪಡೆದು ಬಿಜೆಪಿ ಆರಿಸಿ ಬಂದಿತ್ತು. ಇದೀಗ ಒಬಿಸಿ ಮೋರ್ಚಾ ಸಮಾವೇಶ ವಿಫಲಗೊಳ್ಳುವ ಭಯದಲ್ಲಿ ಮತ್ತೆ ಅಂಥದ್ದೇ ಗಿಮಿಕ್ ಮಾಡುತ್ತಿದೆ ಎಂದು ಕಿಡಿಕಾರಿದರು.
ಕೊನೇಯದಾಗಿ, ಸಿಎಂ ಬಸವರಾಜ ಬೊಮ್ಮಾಯಿ ಅವರೇ ತಳವಾರ ಸಮಾಜ ನಂಬಿಕಸ್ಥ ಸಮಾಜವಾಗಿದ್ದು ನಾಯಕ, ನಾಯಕಡ ಸಮುದಾಯದ ಪರ್ಯಾಯ ಎಂಬುದರಲ್ಲಿ ಎರಡು ಮಾತಿಲ್ಲ. ತಲೆ ತಲಾಂತರದಿಂದ ಶೋಷಣೆಗೆ ಒಳಗಾದ ಇಂಥ ಸಮಾಜವನ್ನು ಮತ್ತೆ ಶೋಷಣೆಗೆ ಒಳಪಡಿಸುವ ನಿಮ್ಮ ನಡೆ ಖಂಡನೀಯ. ಇನ್ನಾದರೂ ಎಚ್ಚೆತ್ತುಕೊಂಡು ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ಒದಗಿಸಬೇಕು. ಅದಕ್ಕಾಗಿ ಪ್ರವರ್ಗ-1ರಲ್ಲಿರುವ ಹಿಂದು ತಳವಾರ ಪದ ಅಳಿಸಬೇಕು. ಇಲ್ಲವಾದಲ್ಲಿ ಒಬಿಸಿ ಮೋರ್ಚಾದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ, ಮುತ್ತಿಗೆ ಹಾಕಿ ತಕ್ಕ ಪಾಠ ಕಲಿಸುವುದರ ಜೊತೆಗೆ ಮುಂಬರುವ ವಿಧಾನ ಸಭೆ ಮತ್ತು ಲೋಕ ಸಭೆ ಚುನಾವಣೆಯಲ್ಲೂ ಪಾಠ ಕಲಿಸಬೇಕಾದ ಅನಿವಾರ್ಯತೆ ಇದೆ. ಎಚ್ಚರ ಎಂದರು.
ಕರ್ನಾಟಕ ತಳವಾರ ಸಮಾಜದ ಹಿತರಕ್ಷಣಾ ಸಮಿತಿ ಅಫಜಲಪುರ ಘಟಕದ ಅಧ್ಯಕ್ಷ ಅಂಬಣ್ಣ ನಾಯ್ಕೋಡಿ, ಡಿಗಂಬರ ತಳವಾರ, ಮಹಾದೇವಪ್ಪ ಎನ್, ಮರೆಪ್ಪ ಜಮಾದಾರ, ಸಿದ್ದಣ್ಣ ಸಿಂದಗಿ, ಗುರು ತಳವಾರ, ದತ್ತು ಶಿವಣಗಿ, ಸಿದ್ದು ಕರಜಗಿ, ಸಂತೋಷ ಗೊಬ್ಬೂರ, ಸಂತು ಜಮಾದಾರ, ಶಿವಕುಮಾರ ತಳವಾರ, ಅಂಬರೀಶ್ ತಳವಾರ, ಸಂಜು ಘತ್ತರಗಿ, ಸೋಮು ನಾಯ್ಕೋಡಿ, ಯಲ್ಲಾಲಿಂಗ ತಳವಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
(ನಿತ್ಯ, ನೈಜ, ನಿರಂತರ ಸುದ್ದಿಗಳಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಬಲಬದಿಯಲ್ಲಿರುವ ಬೆಲ್ ಬಟನ್ ಒತ್ತುವ ಮೂಲಕ ಕ್ಷಣಕ್ಷಣದ ಮಾಹಿತಿ ತಮ್ಮದಾಗಿಸಿಕೊಳ್ಳಿ)