ಬಂಗಾರ ಅಂಗಡಿ ಸೇಡಜಿಗೆ ನಂಬಿಕೆ ದ್ರೋಹ, 2.10 ಕೋಟಿ ರೂ.ಮೌಲ್ಯದ ಚಿನ್ನ ಗಾಯಾಬ್ !
ಸರಕಾರ್ ನ್ಯೂಸ್ ವಿಜಯಪುರ
ಕೋಟಿ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಡೆಲಿವರಿ ಕೊಡಲು ತೆರಳಿದ ಬಂಗಾರ ಅಂಗಡಿಯ ಕೆಲಸಗಾರರು ಅತ್ತ ಡೆಲಿವರಿಯೂ ಕೊಡದೆ ಇತ್ತ ಮಾಲೀಕನಿಗೂ ತಲುಪಿಸದೇ ನಂಬಿಕೆ ದ್ರೋಹ ಎಸಗಿದ್ದಾರೆ !
ವಿಜಯಪುರದ ರಾಮ ಮಂದಿರ ರಸ್ತೆಯ ಬಾಲಾಜಿ ಮಂದಿರ ಹತ್ತರದ ಕಾವ್ಯಾ ಜುವೇಲರ್ಸ್ ಎಂಬ ಹೆಸರಿನ ಹೋಲಸೇಲ್ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಪರೇಶ ಗಜರಾಜ ಜೈನ್ ಎಂಬುವರಿಗೆ ಕೆಲಸಗಾರರೇ ನಂಬಿಕೆ ದ್ರೋಹ ಎಸಗಿದ್ದಾರೆ.
ಮುಂಬೈ ಮೂಲದ ಜಗದೀಶ ಕಾಂತಿಲಾಲ ಗೇಮಾವತ ಹಾಗೂ ಉತ್ತರ ಪ್ರದೇಶ ಮೂಲದ ಧರ್ಮೇಂದ್ರ ರಾಜಕುಮಾರ ಗೌರ ಚಿನ್ನ ಪಡೆದು ಪರಾರಿಯಾಗಿರುವ ಆರೋಪಿಗಳು.
ಏನಿದು ಪ್ರಕರಣ?
ಕಾವ್ಯಾ ಜುವೇಲರ್ಸ್ ನಲ್ಲಿ ನರೇಂದ್ರಬಾಯಿ ಮೋಪತಲಾಲಜಿ ಜೈನ್, ಸಂಕೇತ ವಿಕ್ರಮ ಜೈನ್ ಹಾಗೂ ಮನೋಹರ ಸಿಂಗ್ ಕೆಲಸ ಮಾಡುತ್ತಿದ್ದರು. ಅದರಂತೆ ಆರೋಪಿಗಳಾದ ಜಗದೀಶ ಕಾಂತಿಲಾಲ ಗೇಮಾವತ ಹಾಗೂ ಧರ್ಮೇಂದ್ರ ರಾಜಕುಮಾರ ಗೌರ ಸಹ ಕೆಲಸ ಮಾಡುತ್ತಿದ್ದರು. ನ.13 ರಂದು ಹುಬ್ಬಳ್ಳಿ, ರಾಮದುರ್ಗ, ಸವದತ್ತಿ, ಮುಧೋಳ, ಜಮಖಂಡಿಯ ಅಂಗಡಿಗಳಿಗೆ ಬಂಗಾರದ ಆಭರಣಗಳನ್ನು ಡೆಲಿವರಿ ಮಾಡುವ ಕುರಿತು ನ. 12 ರಂದು ರಾತ್ರಿ 9ರ ಸುಮಾರಿಗೆ ಸೇಲ್ಸ್ ಮ್ಯಾನ್ ಧರ್ಮೇಂದ್ರ ಈತನಿಗೆ 2,10,71,266 ರೂ.ಮೌಲ್ಯದ 4969.4 ಗ್ರಾಂ ಬಂಗಾರದ ಆಭರಣಗಳನ್ನು ಕೊಟ್ಟು ಹುಬ್ಬಳ್ಳಿ, ರಾಮದುರ್ಗ, ಸವದತ್ತಿ, ಮುಧೋಳ, ಜಮಖಂಡಿಯ ಅಂಗಡಿಗಳಿಗೆ ಡೆಲಿವರಿ ಕೊಟ್ಟು ಅವರಿಂದ ಹಣ ಪಡೆದುಕೊಂಡು ಬರಲು ಕಳುಹಿಸಲಾಗಿತ್ತು. ಆದರೆ, ಆರೋಪಿಗಳು ವಂಚಿಸುವ ಉದ್ದೇಶದಿಂದ ರಿಟೇಲ್ ಅಂಗಡಿಗಳಿಗೆ ಡೆಲಿವರಿ ಕೊಡದೇ ನಂಬಿಕೆ ದ್ರೋಹ ಮಾಡಿ, ವಂಚಿಸಿ ನಷ್ಟ ಮಾಡಿದ್ದಾರೆ. ಈ ಬಗ್ಗೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)