ಪಿಡಿಒ ಜೇಷ್ಠತಾ ಪಟ್ಟಿಯಲ್ಲಿ ಸಿಗುವುದೇ ನ್ಯಾಯ? ಸದನದಲ್ಲಿ ಸುರಪುರ ಶಾಸಕ ರಾಜುಗೌಡಗೆ ಸಿಎಂ ಪ್ರತಿಕ್ರಿಯೆ ಏನು?
ಸರಕಾರ್ ನ್ಯೂಸ್ ಬೆಳಗಾವಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಸ್ತುತ ತಯಾರಿಸುತ್ತಿರುವ ರಾಜ್ಯ ಮಟ್ಟದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯಲ್ಲಿ 2500 ಅಭಿವೃದ್ಧಿ ಅಧಿಕಾರಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸುರಪುರ ಶಾಸಕ ನರಸಿಂಹನಾಯಕ್ (ರಾಜುಗೌಡ) ಸದನದಲ್ಲಿ ಧ್ವನಿ ಎತ್ತಿದ್ದಾರೆ.
2009 ಜು.7 ಹಾಗೂ 2010ರಲ್ಲಿ ನೇಮಕವಾದವರ ಜೇಷ್ಠತಾ ಪಟ್ಟಿ ತಯಾರಿಸುತ್ತಿರುವ ಬಗ್ಗೆ ಯಾವಾಗ ಕ್ರಮ ಕೈಗೊಳ್ಳಲಾಗುವುದು ಮತ್ತು ಪ್ರಸ್ತುತ ಈ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪ್ರಸ್ತುತ ಪಂಚಾಯಿತ್ ರಾಜ್ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿ ಸಿದ್ಧಪಡಿಸುತ್ತಿಲ್ಲ. ಆದರೆ, ಈ ಹಿಂದೆ ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ ಗ್ರಾಅಪ 374 ಗ್ರಾಪಂಕಾ 2013, ದಿನಾಂಕ 21-02-2014ರಲ್ಲಿ 2021, ಡಿ. 31ರಲ್ಲಿದ್ದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒಗಳ ರಾಜ್ಯಮಟ್ಟದ ಅಂತಿಮ ಜೇಷ್ಠತಾಪಟ್ಟಿ ಪ್ರಕಟಿಸಲಾಗಿತ್ತು.
ಈ ಜೇಷ್ಠತಾ ಪಟ್ಟಿಯನ್ನು ಪ್ರಶ್ನಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕರ್ನಾಟಕ ರಾಜ್ಯ ಆಡಳಿತ ಮಂಡಳಿಯ ಅರ್ಜಿ ಸಂಖ್ಯೆ : 2782 ರಿಂದ 2792/2014 ಮತ್ತು ಇತರೆ ಅರ್ಜಿಗಳನ್ನು ದಾಖಲಿಸಿದ್ದರು. ಹೀಗಾಗಿ ನ್ಯಾಯ ಮಂಡಳಿಯು ಜೇಷ್ಠತಾ ಪಟ್ಟಿ ರದ್ದುಗೊಳಿಸಿ 2019 ಮಾ. 18ರಲ್ಲಿ ಆದೇಶಿಸಿದೆ.
ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶವನ್ನು ಪ್ರಶ್ನಿಸಿ ಬಾಧಿತರು ಉಚ್ಚ ನ್ಯಾಯಲ ಬೆಂಗಳೂರು ಹಾಗೂ ಕಲಬುರಗಿ ಪೀಠಗಳಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರ ಸಹ ರಿಟ್ ಅರ್ಜಿ ಸಲ್ಲಿಸಿದೆ. ಉಚ್ಚ ನ್ಯಾಯಾಲಯವು ಪ್ರಸ್ತುತ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸುತ್ತಿದೆ. ಆಗಿಂದಾಗೆ ನ್ಯಾಯಾಲಯ ನೀಡುವ ನಿರ್ದೇಶನದಂತೆ ಕಾರ್ಯನಿರತ ಪಿಡಿಒಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಪ್ರಕರಣದ ಅಂತಿಮ ವಿಚಾರಣೆ ಬಾಕಿ ಇದ್ದು, ನ್ಯಾಯಾಲವು ಅಂತಿಮವಾಗಿ ನೀಡುವ ಆದೇಶ ಅನುಸರಿಸಿ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿ ತಯಾರಿಸಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)