ಗಿಫ್ಟ್ ಕೂಪನ್ ನಂಬಿ ಮೋಸ ಹೋದ ಗೃಹಿಣಿ, ನಾಪ್ಟೋಲ್ ಕಾರ್ ಆಸೆ ತೋರಿಸಿ ವಂಚನೆ, 10 ಲಕ್ಷಕ್ಕೂ ಅಧಿಕ ಹಣ ಖೋತಾ…!
ಸರಕಾರ ನ್ಯೂಸ್ ತುಮಕೂರ
ಕಾರು ಗಿಫ್ಟ್ ಬಂದಿದೆ ಎಂದು ಒಂದು ಗಿಫ್ಟ್ ಕೂಪನ್ ಕಳುಹಿಸಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಪ್ರಕರಣ ತುಮಕೂರಿನಲ್ಲಿ ನಡೆದಿದೆ.
ಕ್ಯಾತಸಂದ್ರದ ಬಡ್ಡಃಳ್ಳಿ ಬಳಿಯ 8ನೇ ಕ್ರಾಸ್ ಬಳಿಯ ನಿವಾಸಿ ಶ್ವೇತಾ ಕೆ.ಎಲ್. ಎಂಬುವವರು ಮೋಸಕ್ಕೆ ಒಳಗಾಗಿದ್ದು ಬರೋಬ್ಬರಿ 10,28,010 ರೂಪಾಯಿ ಕಳೆದುಕೊಂಡಿದ್ದಾರೆ. ವಂಚನೆಯ ಅರಿವಾಗುತ್ತಿದ್ದಂತೆ ಶ್ವೇತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಹೋದ ಹಣ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಏನಿದು ಪ್ರಕರಣ?
ಶ್ವೇತಾಳ ಮನೆಗೆ ಪೋಸ್ಟ್ ಬಂದಿದ್ದು ಅದನ್ನು ಓಪನ್ ಮಾಡಿ ನೋಡಲಾಗಿ ನಾಪ್ಟೋಲ್ ಕಂಪನಿ ಕಾರ್ ಗಿಫ್ಟ್ ಬಂದಿದೆ ಎಂದು ಒಂದು ಕೂಪನ್ ಬಂದಿದೆ. ಅದನ್ನು ಪಡೆಯಲು ವಾಟ್ಸಪ್ ಮೂಲಕ ಸಂಪರ್ಕಿಸಿ ಎಂದು ಕೂಪನ್‌ನಲ್ಲಿ ನಂಬರ್ ನಮೂದಿಸಲಾಗಿತ್ತು. ಆ ನಂಬರ್‌ಗೆ ಸಂಪರ್ಕಿಸಲಾಗಿ ಅಪರಚಿತ ವ್ಯಕ್ತಿಗಳು ಕಾರ್ ಬೇಕಾ ಅಥವಾ 14,80,000 ರೂಪಾಯಿ ಹಣ ಬೇಕಾ ಎಂದು ಕೇಳಿದ್ದಾರೆ. ಅದಕ್ಕೆ ಶ್ವೇತಾ ಹಣ ಬೇಕು ಎಂದಿದ್ದು ಹಾಗಾದರೆ ಎಚ್‌ಎಸ್ ಬಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು ಅದಕ್ಕಾಗಿ 30 ಸಾವಿರ ರೂಪಾಯಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ವರ್ಗಾವಣೆ ಮಾಡಲು ತಿಳಿಸಿದ್ದಾರೆ. ಅದರಂತೆ ಹಣ ಕಟ್ಟಲಾಗಿ ಸದರಿ ಖಾತೆಗೆ 14,80,000 ರೂಪಾಯಿ ಹಣ ಕ್ರೆಡಿಟ್ ಮಾಡಿದ್ದೇವೆ ಎಂದು ಸ್ಕ್ರೀನ್ ಶಾಟ್ ಕಳುಹಿಸಿದ್ದಾರೆ. ಈ ಹಣ ಲೆಡ್ಜರ್ ಬ್ಯಾಲೆನ್ಸ್ ಬರಬೇಕೆಂದರೆ 3 ಲಕ್ಷ ರೂಪಾಯಿ ಡಿಪಾಸಿಟ್ ಮಾಡಬೇಕೆಂದಿದ್ದಾರೆ. ಆದರೆ ಆಗ ಶ್ವೇತಾ ಹಣ ನೀಡಿಲ್ಲ. ಎರಡು ತಿಂಗಳ ಬಳಿಕ ಮತ್ತೆ ಕರೆ ಮಾಡಿ ಡಿಪಾಸಿಟ್ ಮಾಡಲು ತಿಳಿಸಿದರು.
ತಾನೇ ಸಿಕ್ಕಿಹಾಕಿಕೊಂಡ ಶ್ವೇತಾ:
ನಂತರ ಶ್ವೇತಾ ಖಾತೆಗೆ 14,09,708 ರೂಪಾಯಿ ಲೋನ್ ಬಂದಿದ್ದು ಅಪರಿಚಿತರು ಕೇಳಿದ ಹಣ ಕೊಡುವುದಾಗಿ ತಿಳಿಸಿದ್ದಾರೆ. ಅದಕ್ಕೆ ಅವರು ನಾವೇ ಡಿಪಾಸಿಟ್ ಮಾಡಿಕೊಳ್ಳುತ್ತೇವೆ ನಿಮ್ಮ ಎಟಿಎಂ ಕಾರ್ಡ್ ಮಾಹಿತಿ, ಪಾಸ್‌ವರ್ಡ್ ಹಾಗೂ ಓಟಿಪಿ ನೀಡಿ ಎಂದಾಗ ಶ್ವೇತಾ ಆ ಎಲ್ಲ ಮಾಹಿತಿ ನೀಡಿದ್ದಾರೆ. ಬಳಿಕ ಹಂತ ಹಂತವಾಗಿ ಹಣ ಪಡೆದು ಒಟ್ಟು 10,28,010 ರೂಪಾಯಿ ವಂಚನೆ ಮಾಡಿದ್ದಾರೆ.
ಇಂಥ ಪ್ರಕರಣಗಳು ಪದೇ ಪದೇ ಹೆಚ್ಚಾಗುತ್ತಿದ್ದು, ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ. ಅದಕ್ಕಾಗಿ ಜಾಗೃತಿ ಮೂಡಿಸಬೇಕಿದ್ದು, ಸಾರ್ವಜನಿರು ಕೈ ಜೋಡಿಸಬೇಕು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)