ರಾಜ್ಯ

ಇಂಡಿ ಶಾಸಕರ ನೀರಾವರಿ ಕಳಕಳಿ, ಸದನದಲ್ಲಿ ಧ್ವನಿ ಎತ್ತಿದ ಯಶವಂತರಾಗೌಡ ಪಾಟೀಲ, ನೀರಾವರಿ ಸಚಿವರು ಹೇಳಿದ್ದೇನು ಗೊತ್ತಾ?

ಸರಕಾರ‌ ನ್ಯೂಸ್ ಬೆಂಗಳೂರು

ಇಂಡಿ ತಾಲೂಕಿನ ಸಮಗ್ರ ನೀರಾವರಿಗೆ ಸಂಬಂಧಿಸಿದಂತೆ ಶಾಸಕ ಯಶವಂತರಾಯಗೌಡ ಪಾಟೀಲ ಸದನದಲ್ಲಿ ಧ್ವನಿ ಎತ್ತುವ ಮೂಲಕ ಜಲಕಾಳಜಿ ಪ್ರದರ್ಶಿಸಿದ್ದಾರೆ.

ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ, 16 ಕೆರೆಗಳಿಗೆ ನೀರು ತುಂಬುವ ಕಾಮಗಾರಿ ಹಾಗೂ ಪ್ರಸಕ್ತ ಸಾಲಿನಲ್ಲಿ ಮುಂಗಾರು ವಿಳಂಬದಿಂದಾಗಿ ತಲೆದೋರಿರುವ ಕುಡಿಯುವ ನೀರಿನ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ಆ ಮೂಲಕ ಅನುಷ್ಟಾನಗೊಳ್ಳಬೇಕಾದ ನೀರಾವರಿ ಯೋಜನೆಗೆ ವೇಗ ನೀಡುವಂತೆ, ಪ್ರಗತಿಯಲ್ಲಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಮತ್ತು ಮುಂಜಾಗೃತ ಕ್ರಮವಾಗಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕಳಕಳಿ ವ್ಯಕ್ತಪಡಿಸಿದ್ದಾರೆ.

ರೇವಣಸಿದ್ಧೇಶ್ವರ ಯೋಜನೆ:

ಮಹತ್ವಾಕಾಂಕ್ಷಿ ರೇವಣಸಿದ್ಧೇಶ್ವರ ಏತ ನೀರಾವರಿಗೆ ಸಂಬಂಧಿಸಿದಂತೆ ರ್ಕಾರದ ಗಮನ ಸೆಳೆದ ಯಶವಂತರಾಯಗೌಡ ಪಾಟೀಲರು, ಯೋಜನೆ ಅಂದಾಜು ವೆಚ್ಛ, ಅನುದಾನದ ವಿವರ, ಕಾಮಗಾರಿ ಸ್ಥಿತಿಗತಿಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವರಿಂದ ವಿವರ ಪಡೆದರು. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಶಾಸಕರಿಗೆ ಮಾಹಿತಿ ನೀಡುತ್ತಾ, ಇಂಡಿ ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳಿಗೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರನ್ನು ಎತ್ತಿ ಸುಮಾರು 28 ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರುಣಿಸುವ ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ 693.90 ಕೋಟಿ ರೂ.ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಎರಡನೇ ಹಂತದಲ್ಲಿ 805.00 ಕೋಟಿ ರೂ.ಮೊತ್ತದ ಕಾಮಗಾರಿಗೆ ಕೆಬಿಜೆಎನ್‌ಎಲ್‌ನಿಂದ ತಿರುವಳಿ ನೀಡಲಾಗಿದ್ದು, ಅನುಮೋದನೆಯೊಂದಿಗೆ ಮುಂದಿನ ಕ್ರಮ ಜರುಗಿಸಲಾಗುವುದು. ಮೂರನೇ ಹಂತದಲ್ಲಿ ಪೈಪ ವಿತರಣಾ ಜಾಲದ ಕಾಮಗಾರಿಗೆ ಸಂಬಂಧಿಸಿದಂತೆ ಸರ್ವೆ, ವಿನ್ಯಾಸ ಮತ್ತು ಪತ್ರಿಕೆ ತಯಾರಿಕೆಗೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಕೆರೆಗೆ ನೀರು ತುಂಬುವ ಯೋಜನೆ:

ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬುವ ಯೋಜನೆ ಬಗ್ಗೆ ಪ್ರಶ್ನೆ ಮಾಡಿದ ಶಾಸಕ ಯಶವಂತರಾಯಗೌಡರು ಯೋಜನೆ ವಿವರ, ಸದ್ಯದ ಸ್ಥಿತಿಗತಿ ಹಾಗೂ ಪೂರ್ಣಗೊಳ್ಳಲು ಬೇಕಾದ ಕಾಲಮಿತಿಗೆ ಸಂಬಂಧಿಸಿದಂತೆ ಜಲಸಂಪನ್ಮೂಲರಿಂದ ವಿವರ ಪಡೆದಿದ್ದಾರೆ. ಆ ಪ್ರಕಾರ ಇಂಡಿಯ ದೇಗಿನಾಳ, ಹಳಗುಣಕಿ, ಬಬಲಾದ, ಕೂಡಗಿ, ಗುಂದ್ವಾನ, ಕೋಳುರಗಿ, ಹಡಲಸಂಗ-1 ಮತ್ತು 2, ಸೊನಕನಹಳ್ಳಿ, ನಂದರಗಿ, ಶಿಗ್ಗಣಾಪುರ, ಸಾತಲಗಾಂವ, ಸಾವಳಸಂಗ, ಜಿಗಜಿವಣಗಿ, ಇಂಚಗೇರಿ-1 ಮತ್ತು 2, ನಿಂಬಾಳ ಮತ್ತು ಹೊರ್ತಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಕೈಗೊಳ್ಳಲು 140.00 ಕೋಟಿ ರೂ.ಅಂದಾಜು ಮೊತ್ತದ ಕಾಮಗಾರಿ ಕೈಗೊಳ್ಳಲು ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಯೋಜನೆಯ ಟರ್ನ್ ಕೀ ಆಧಾರದ ಕಾಮಗಾರಿಯನ್ನು 196.99 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಡಿ.ಕೆ. ಶಿವಕುಮಾರ ವಿವರಿಸಿದ್ದಾರೆ.

ಶಾಖಾ ಕಾಲುವೆಗೆ ನೀರು:

ಪ್ರಸ್ತುತ ಮುಂಗಾರು ವಿಳಂಬದಿಂದಾಗಿ ಇಂಡಿ ಭಾಗದಲ್ಲಿ ಜಲಮೂಲಗಳು ಬತ್ತಿದ್ದು ಕುಡಿಯುವ ನೀರಿಗೂ ಸಮಸ್ಯೆಯೂ ಉಲ್ಭಣಿಸಿದೆ. ಹೀಗಾಗಿ ಇಂಡಿ ಶಾಖಾ ಕಾಲುವೆಗೆ ನೀರುವ ಹರಿಸುವ ಕುರಿತಂತೆ ಶಾಸಕರು ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವರು, ಮೇ 1ರಿಂದ 10ರವರೆಗೆ ಕುಡಿಯುವ ನೀರಿನ ಸಂಗ್ರಹಣೆಗಾಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆ ಇಲಾಖೆ ಮೂಲಕ ನೀರು ಸರಬರಾಜು ಮಾಡಿಕೊಳ್ಳಲಾಗಿದೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳ ನೀರಿನ ಒಳಹರಿವು ಆಧರಿಸಿ ಮತ್ತೆ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.

error: Content is protected !!