ರಾಜ್ಯ

ಬಸವನಬಾಗೇವಾಡಿಯಲ್ಲಿಯೇ ಬಸವ ಜಯಂತಿ ಆಚರಣೆಯಾಗಲಿ, ಸದನದಲ್ಲಿ ಪ್ರಕಾಶ ರಾಠೋಡ ಪ್ರಸ್ತಾಪ, ಸರ್ಕಾರದ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? ಈ ವರದಿ ನೋಡಿ…

ಬೆಂಗಳೂರ: ಭಕ್ತಿಭಂಡಾರಿ ಶ್ರೀ ಬಸವೇಶ್ವರ ಜಯಂತ್ಯುತ್ಸವ ಬಸವ ಜನ್ಮಭೂಮಿ ಬಸವನ ಬಾಗೇವಾಡಿಯಲ್ಲಿ ಆಚರಣೆಯಾಗಲಿ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಸರ್ಕಾರಕ್ಕೆ ಒತ್ತಾಯಿಸಿದರು.

ಬುಧವಾರ ವಿಧಾನ ಮಂಡಲ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬಸವನ ಬಾಗೇವಾಡಿಯಲ್ಲಿ ರಾಜ್ಯಮಟ್ಟದ ಅಣ್ಣ ಬಸವಣ್ಣನವರ ಜಯಂತಿ ಉತ್ಸವ ಆಚರಣೆಗೆ ಸರ್ಕಾರ ಆಸಕ್ತಿ ಹೊಂದುವಂತಾಗಬೇಕು ಎಂದರು.

ಬಸವೇಶ್ವರರು  ಸಾಮಾಜಿಕ ಪಿಡುಗು, ತಾರತಮ್ಯ ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಮನುಕುಲದ ಒಳಿತಿಗಾಗಿ 1500ಕ್ಕೂ ಹೆಚ್ಚು ವಚನಗಳನ್ನು ನೀಡಿದ ಮಹಾನ್ ಮಾನವತಾವಾದಿ.

ಭಾರತದ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್‌ರವರು ವಿಶ್ವಗುರು ಬಸವಣ್ಣನವರ ಭಾವಚಿತ್ರವುಳ್ಳ 5 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿರುವರು, ಭಾರತ ನಾಣ್ಯದ ಮೇಲೆ ಭಾವಚಿತ್ರವುಳ್ಳ ಮೊದಲ ಕನ್ನಡಿಗ ಇವರು. 2003 ರಲ್ಲಿ ದೆಹಲಿಯ ಪಾರ್ಲಿಮೆಂಟಿನಲ್ಲಿ ಬಸವಣ್ಣನವರ ಅಶ್ವಾರೂಢ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಭಾರತ ಸರ್ಕಾರ ಅಂಚೆ ಇಲಾಖೆ 1967 ರಲ್ಲಿ 15 ಪೈಸೆ ಮತ್ತು 1997 ರಲ್ಲಿ 2 ರೂಪಾಯಿ ಮುಖಬೆಲೆಯ ಅಂಚೆ ಚೀಟಿಯನ್ನು ಮುದ್ರಿಸಿತು. ಶ್ರೀ ಸಿದ್ಧರಾಮಯ್ಯರವರು ಮುಖ್ಯಮಂತ್ರಿಗಳಾಗಿದ್ದಾಗ ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ಹೊರಡಿಸಿದರು.

ಜಗತ್ತಿಗೆ ಪ್ರಥಮ ಪಾರ್ಲಿಮೆಂಟ್ ರೂಪಿಸಿ, ಏಕತೆ, ಮಾನವೀಯತೆ, ಸಮಾನತೆಯ ತತ್ವಗಳನ್ನು ಸುರಿದ ಮಹಾನ್ ಚೇತನ ಬಸವಣ್ಣನ ಜನ್ಮಸ್ಥಳದಲ್ಲಿ ಜಯಂತಿ ಆಚರಣೆಯಾದರೆ ಅರ್ಥಪೂರ್ಣ. ಈ ಭಾಗದ ಜನತೆಯ ಹಲವಾರು ವರ್ಷಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಬಸವಣ್ಣ ಸಾಮಾಜಿಕ ಪರಿವರ್ತನೆಯ ಹರಿಕಾರ, ಉದಾತ್ತ ತತ್ವಗಳನ್ನು ಸುರಿದ ಅವರ ಬದುಕೇ ಬಂದು ಸಮಾನತೆಯ ದಿವ್ಯ ಸಂದೇಶ. ಈ ಅಣ್ಣ ಬಸವಣ್ಣನವರ ವಿಚಾರಗಳು ಜಾಗತಿಕವಾಗಿ ಇನ್ನೂ ಪ್ರಚಾರವಾಗಬೇಕಿದೆ. ಅದಕ್ಕೆ ಹೆಜ್ಜೆಯಾಗಿ ಜಯಂತ್ಯುತ್ಸವ ಅರ್ಥಪೂರ್ಣ ಆಯೋಜನೆ ಆಗಬೇಕು. ಅವರ ವಚನ ಕುರಿತು ಚಿಂತನ, ಮಂಥನ ನಡೆಯಬೇಕು. ಕಾಯಕ ದಾಸೋಹ, ಪ್ರಜಾಪ್ರಭುತ್ವ, ಪರಿಕಲ್ಪನೆ ಹೀಗೆ ಅಣ್ಣ ಬಸವಣ್ಣ ಅವರ ಕೊಡುಗೆಯನ್ನು ಸಾರುವ ಕೆಲಸ ನಿರಂತರವಾಗಿ ನಡೆಯಬೇಕು. ಕನಸಾಗಿರುವ ಬಸವೇಶ್ವರ ಜಯಂತೋತ್ಸವವನ್ನು ಬಸವನ ಬಾಗೇವಾಡಿಯಲ್ಲಿಯೇ ನಡೆಸಬೇಕು ಎಂಬ ವಿಚಾರವನ್ನು ನಾನು ಬಸವನಬಾಗೇವಾಡಿ ತಾಲ್ಲೂಕಿನ ಮಗನಾಗಿ ಶೂನ್ಯವೇಳೆಯ ಅಡಿಯಲ್ಲಿ ಪ್ರಸ್ತಾಪಿಸಲು ಈ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ ಈ ಬಗ್ಗೆ  ಜಿಲ್ಲಾಡಳಿತ ಸಿದ್ದತೆ ಮಾಡಿ ಪ್ರಸ್ತಾವನೆ ಸಲ್ಲಿಸಿದರೆ ಖಂಡಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ‌ನೀಡಿದರು.

 

error: Content is protected !!