Uncategorizedರಾಜ್ಯ

ತಳವಾರ-ಪರಿವಾರ ಮೀಸಲು ಗೋಜಲು, ಸದನದಲ್ಲಿ ಎಂಎಲ್‌ಸಿ ಸಾಬಣ್ಣ ಪ್ರಶ್ನೆ, ಸರ್ಕಾರ ನೀಡಿದ ಸಬೂಬು ಏನು?

ಸರಕಾರ್‌ ನ್ಯೂಸ್‌ ಬೆಂಗಳೂರ

ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ಈವರೆಗೆ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈ ಬಗ್ಗೆ ಸಾಕಷ್ಟು ಹೋರಾಟ ನಡೆದರೂ ಎಚ್ಚೆತ್ತುಕೊಳ್ಳದ ಸರ್ಕಾರಕ್ಕೆ ತಳವಾರ-ಪರಿವಾರ ಸಮುದಾಯ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದು, ಇನ್ನೊಂದೆಡೆ ವಿಧಾನ ಪರಿಷತ್‌ ಸದಸ್ಯ ಸಾಬಣ್ಣ ತಳವಾರ ವಿಧಾನ ಮಂಡಲ ಅಧಿವೇಶನದಲ್ಲಿಚುಕ್ಕೆ ಗುರುತಿನ ಪ್ರಶ್ನೆ ಕೇಳುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಏನಿದು ಪ್ರಶ್ನೆ?

ಸರ್ಕಾರ 2022 ಜ.29 ರಂದು ಹೊರಡಿಸಿದ ಸುತ್ತೋಲೆ ಪ್ರಕಾರ ಉತ್ತರ ಕರ್ನಾಟಕದ ತಹಸೀಲ್ದಾರ್‌ ರು ತಳವಾರ ಸಮುದಾಯಕ್ಕೆ ಎಸ್‌ ಟಿ ಪ್ರಮಾಣ ಪತ್ರ ನೀಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಇಲ್ಲವೆಂದು ಉತ್ತರಿಸಿದೆ. ಆ ಮೂಲಕ ಜಾಣ ಕುರುಡುತನ ಪ್ರದರ್ಶಿಸಿದೆ.

ಇನ್ನು ಹಿಂದುಳಿದ ವರ್ಗಗಳ ಇಲಾಖೆಯಡಿ ಬರುವ ಪ್ರವರ್ಗ-1 ರ ಪಟ್ಟಿಯಿಂದ ತಳವಾರ ಜಾತಿಯನ್ನು ತೆಗೆದು ಹಾಕಲು ಆಗಿರುವ ವಿಳಂಬಕ್ಕೆ ಕಾರಣವೇನು? ಮತ್ತು ಪರಿಶಿಷ್ಟ ಪಂಗಡ ಮತ್ತುಪ್ರವರ್ಗ-1 ಎರಡರಲ್ಲೂ ತಳವಾರ ಇರುವುದರಿಂದ ಅಧಿಕಾರಿಗಳು ಗೊಂದಲ ಸೃಷ್ಠಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ? ಎಂದು ಪ್ರಶ್ನಿಸಲಾಗಿ, ಪರಿಶಿಷ್ಟಪಂಗಡ ಕಲ್ಯಾಣ ಸಚಿವರು ಉತ್ತರಿಸುತ್ತಾ, ಭಾರತ ಸರ್ಕಾರ 2020 ಮಾ.19ರ ಅಧಿಸೂಚನೆಯಲ್ಲಿ ಕ್ರಮ ಸಂಖ್ಯೆ 38ರಲ್ಲಿನ ನಾಯಕಡ, ನಾಯಕ ಜಾತಿಯ ಪರ್ಯಾಯ ಪದಗಳೆಂದು ಪರಿವಾರ ಮತ್ತು ತಳವಾರ ಜಾತಿಗಳನ್ನು ರಾಜ್ಯ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶಿಸಿದೆ.

ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 23 ಎಸ್‌ಎಡಿ 2009, ದಿನಾಂಕ : 31/08/2020ರಲ್ಲಿ ನೈಜವಾದ ಪಂಗಡದ ಜಾತಿಗೆ ಸೇರಿದ ಪರಿವಾರ ಮತ್ತು ತಳವಾರ ಜಾತಿ ವ್ಯಕ್ತಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ನಿಗದಿತ ಅವಧಿಯೊಳಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಪರಿಹಾರ ಏನು?

ಮುಂದುವರಿದು ದಿನಾಂಕ 28/05/2020ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ದಿನಾಂಕ: 29/01/2022ರಂದು ಸಹ ಸುತ್ತೋಲೆ ಹೊರಡಿಸಿ ಕೇಂದ್ರ ಸರ್ಕಾರದ ಅಧಿಸೂಚನೆ ಹಾಗೂ ರಾಜ್ಯ ಸರ್ಕಾರದ ದಿನಾಂಕ: 28/05/2020ರ ಅಧಿಸೂಚನೆ ಅನ್ವಯ ಜಾತಿ ಪ್ರಮಾಣ ಪತ್ರ ವಿತರಣಾ ಪ್ರಾಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನಾಯಕಡ, ನಾಯಕ ಜಾತಿಯ ಪರ್ಯಾಯ ಸಮುದಾಯಗಳೆಂದು ಪರಿಗಣಿಸಿರುವ ಪರಿವಾರ ಮತ್ತು ತಳವಾರ ಜಾತಿಗೆ ಸೇರಿದವರು ಕೇಂದ್ರ ಸರ್ಕಾರದ ಆದೇಶದಂತೆ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ಅಧಿನಿಯಮ, 1990 ನಿಯಮಗಳ 1992ರ ಪ್ರಕಾರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುವಂತೆ ಕೋರಿ ಅರ್ಜಿಗಳನ್ನು ಸಮುಚಿತ ಮಾರ್ಗದಲ್ಲಿ ತಹಸೀಲ್ದಾರ್‌ರಿಗೆ ಸಲ್ಲಿಬೇಕಾಗಿರುತ್ತದೆ. ಸಂಬಂಧಪಟ್ಟ ತಹಸೀಲ್ದಾರ್‌ರು ಸದರಿ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ವಹಿಸಿದ್ದಾಗಿ ತಿಳಿಸಿದ್ದಾರೆ.

ಅಲ್ಲದೇ, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿರುವ ಪರಿವಾರ ಮತ್ತು ತಳವಾರ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈ ಬಿಡುವ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಭಿಪ್ರಾಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಹಾಗಾದರೆ, ಹಿಂದುಳಿದ ವರ್ಗಗಳ ಇಲಾಖೆ ಸಚಿವರು ಏನು ಮಾಡುತ್ತಿದ್ದಾರೆ? ಈವರೆಗೂ ಪ್ರವರ್ಗ-1ರಿಂದ ಕೈಬಿಡದೇ ಇರುವುದಕ್ಕೆ ಕಾರಣವೇನು? ಎಂಬುದರ  ಬಗ್ಗೆ ಸರ್ಕಾರವೇ ಉತ್ತರಿಸಬೇಕಿದೆ.

error: Content is protected !!