ರಾತ್ರೋರಾತ್ರಿ ಟ್ರ್ಯಾಕ್ಟರ್ ಕಳ್ಳತನ, ಮೂವರ ಬಂಧನ, ಹೇಗಿತ್ತು ಗೊತ್ತಾ ಪೊಲೀಸರ ಕಾರ್ಯಾಚರಣೆ?
ಸರಕಾರ್ ನ್ಯೂಸ್ ತಿಕೋಟಾ
ಟ್ಯಾಕ್ಟರ್ ಕಳ್ಳತನಗೈದು ಪರಾರಿಯಾಗಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.
ಮಹಾರಾಷ್ಟ್ರ ಮೂಲದ ಸಂತೋಷ ಊರ್ಫ್ ಮಲ್ಲು ಪರಸುರಾಮ ಕಾಂಬಳೆ (28), ದಿಲೀಪ ಕೃಷ್ಣಾ ಕಾಂಬಳೆ (31) ಹಾಗೂ ಸಚೀನ ವಂದನಾ ಕಾಂಬಳೆ (24) ಬಂಧಿತ ಆರೋಪಿಗಳು. ಇವರಿಂದ ಅಂದಾಜು 2.50 ಲಕ್ಷ ರೂ.ಮೌಲ್ಯದ ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ:
ಕೋಟ್ಯಾಳ ಗ್ರಾಮದ ವಾಟರ್ ಟ್ಯಾಂಕ್ ಹತ್ತಿರ ನಿಲ್ಲಿಸಿದ್ದ ಟ್ರ್ಯಾಕ್ಟರ್‌ನ್ನು 2022 ಸೆ.10 ರಂದು ರಾತ್ರಿ 10 ರಿಂದ ಸೆ.11 ಬೆಳಗ್ಗೆ 7 ರ ಅವಧಿಯಲ್ಲಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ರಾಜು ಕಮಲು ಚವಾಣ್ ಎಂಬುವರು ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಪಿ ಎಚ್.ಡಿ. ಆನಂದಕುಮಾರ ಕಳ್ಳರ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು.
ಎಎಸ್‌ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಸಿದ್ಧೇಶ್ವರ ಮಾರ್ಗದರ್ಶನದಲ್ಲಿ ಸಿಪಿಐ ಸಂಗಮೇಶ ಪಾಲಭಾವಿ, ಪಿಎಸ್‌ಐ ಶ್ರೀಕಾಂತ ಕಾಂಬಳೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಸೆ.28ರಂದು ರತ್ನಾಪುರ ಕಡೆಗೆ ಕಾರ್ಯಾಚಾರಣೆ ನಡೆಸುತ್ತಿದ್ದ ವೇಳೆ ಮೂವರು ಆರೋಪಿಗಳು ಟ್ರ್ಯಾಕ್ಟರ್ ಸಮೇತ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್‌ಪಿ ಆನಂಕುಮಾರ ತಿಳಿಸಿದ್ದಾರೆ.