ವಿಜಯನಗರ

ಮೇ‌‌ 16ಕ್ಕೆ ಶಾಲೆಗಳು ಪುನಾರಂಭ, ಅಗತ್ಯ ಕ್ರಮ, ಸಿಇಓ ರಾಹುಲ್ ಶಿಂಧೆ ಹೇಳಿದ್ದೇನು?

ವಿಜಯಪುರ: 2022-23ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 16 ರಿಂದ ಪ್ರಾರಂಭವಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಶಾಲಾ ಕೋಣೆಗಳನ್ನು ಹಾಗೂ ಆವರಣವನ್ನು ಸ್ವಚ್ಛಗೊಳಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲೆಗಳನ್ನು ಅಲಂಕರಿಸಿ, ಮಕ್ಕಳನ್ನು ಸ್ವಾಗತಿಸಲು ಸಿದ್ದತೆಯನ್ನು ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಒಟ್ಟು 3057 ಶಾಲೆಗಳಲ್ಲಿ ಒಟ್ಟು 5.10 ಲಕ್ಷ ಮಕ್ಕಳಿದ್ದು ಶಾಲಾ ಪ್ರಾರಂಭೋತ್ಸವ ದಿನದಂದು ಎಲ್ಲ ಮಕ್ಕಳು ಶಾಲೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ:
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಎಲ್ಲ ಸಾರ್ವಜನಿಕರು ಶಾಲಾ ಪ್ರಾರಂಭೋತ್ಸವದಂದು ಭಾಗಿಯಾಗಿ ತಮ್ಮ ಸುತ್ತಲಿರುವ ಎಲ್ಲ ಅರ್ಹ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಕೈಜೋಡಿಸಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪೋಷಕರಲ್ಲೂ ಮನವಿ:
ಶಾಲಾ ಪ್ರಾರಂಭೋತ್ಸವ ನಿಟ್ಟಿನಲ್ಲಿ ಗ್ರಾಮಗಳಲ್ಲಿರುವ ಎಲ್ಲ ಅರ್ಹ ವಯೋಮಾನದ ಮಕ್ಕಳು ಶಾಲೆಗೆ ಹಾಜರಾಗುವಂತೆ ಡಂಗೂರ ಸಾರಿಸಿ ಪೋಷಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ಅಂಗನವಾಡಿಯಲ್ಲಿರುವಂತ ಮಕ್ಕಳನ್ನು ಭೇಟಿ ಮಾಡಿ ಶಾಲೆಗೆ ದಾಖಲಿಸಲು ಶಿಕ್ಷಕರ ಮೂಲಕ ಕ್ರಮವಹಿಸಲು ಈಗಾಗಲೇ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳಿಗೆ ಸೂಚಿಲಾಗಿದೆ.

ಬಿಸಿ ಊಟವೂ ಆರಂಭ:
ಶಾಲೆಗೆ ಆಗಮಿಸುವ ಎಲ್ಲ ಮಕ್ಕಳಿಗೆ ಬಿಸಿ ಊಟವನ್ನು ಬಡಿಸುವದರ ಮೂಲಕ ಕಲಿಕಾ ಪ್ರೇರಣಾ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು.

ಶಿಕ್ಷಕರಿಗೆ ತರಬೇತಿ:
ಕೋವಿಡ್-19ರ ಮಹಾಮಾರಿ ಯಿಂದ ಮಕ್ಕಳಲ್ಲಿ ಕಲಿಕಾ ಕೊರತೆ ಉಂಟಾಗಿದ್ದು, ಕಲಿಕಾ ಕೊರತೆ ನೀಗಿಸುವ ನಿಟ್ಟಿನಲ್ಲಿ “ಕಲಿಕಾ ಚೇತರಿಕೆ” ಅಂತಹ ಗುಣಮಟ್ಟದ ತರಬೇತಿಯನ್ನು ಎಲ್ಲ ಶಿಕ್ಷಕರಿಗೆ ನೀಡಿ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಕ್ರಮವಹಿಸಿದೆ ಎಂದು  ಸಿಇಓ ಅವರು ತಿಳಿಸಿದ್ದಾರೆ.

error: Content is protected !!