ವಿಜಯಪುರ

ಧ್ಚನಿ ವರ್ಧಕಗಳಿಗೆ ಕಡಿವಾಣ, ದೇಶದ ಕಾನೂನು ಗೌರವಿಸಲೇಬೇಕು, ಎಸ್‌ಪಿ ಆನಂದಕುಮಾರ ನೀಡಿದ ಎಚ್ಚರಿಕೆ ಏನು ಗೊತ್ತಾ?

ವಿಜಯಪುರ: ಆಜಾನ್ ಹಾಗೂ ಹನುಮಾನ್ ಚಾಲಿಸ್ ವಿವಾದ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಮುಂದಾಗಿದ್ದು, ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದೆ.
ಮಂದಿರ, ಮಸೀದಿ, ಚರ್ಚ್ ಅಥವಾ ಯಾವುದೇ ಧಾರ್ಮಿಕ ಸಂಸ್ಥೆ ಇರಲಿ ಧ್ವನಿ ವರ್ಧಕಗಳ ಬಳಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲೇಬೇಕು. ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಧಿಸಿದ ಇತಿಮಿತಿಗಳನ್ನು ದಾಟಕೂಡದು. ಹಾಗೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಬಗ್ಗೆ ಎಸ್‌ಪಿ ಆನಂದಕುಮಾರ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ 1999 ನೋಟಿಸ್ ಜಾರಿ ಮಾಡಿದ್ದೇವೆ. ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಇನ್ನಿತರ ಕಡೆಗಳಲ್ಲೂ ಶಬ್ದ ಮಾಲಿನ್ಯ ಮಾಡಿದ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಅಂಥ 123 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಈ ದೇಶದ, ನೆಲದ ಕಾನೂನು ಗೌರವಿಸಬೇಕು. ವಿನಾಕಾರಣ ಸಂಘರ್ಷಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣ ಮಾಡಬಾರದು. ದೇಶ ಮತ್ತು ರಾಜ್ಯದ ಕಾನೂನು ಪಾಲನೆ ಮಾಡಿ. ಈ ಬಗ್ಗೆ ಸಾರ್ವಜನಿಕರ ಹಿತ ದೃಷ್ಟಿಯಿಂದ ತಿಳಿವಳಿಕೆ ಕೂಡ ನೀಡಲಾಗುತ್ತಿದೆ. ವಿಜಯಪುರ ಪೊಲೀಸ್ ಇಲಾಖೆ ಜನಸ್ನೇಹಿ ಆಡಳಿತ ಮಾಡಲು ಇದೊಂದು ದಿಟ್ಟ ಹೆಜ್ಜೆಯನ್ನಿರಿಸಿದೆ ಎಂದವರು ತಿಳಿಸಿದರು.

error: Content is protected !!