ಶಾಸಕ ಯಶವಂತರಾಯಗೌಡ ಪಾಟೀಲ ಟಾಂಗ್, ಯತ್ನಾಳರಿಗೆ ಮಿದುಳು-ಬಾಯಿಗೆ ಲಿಂಕ್ ಇಲ್ಲ?
ವಿಜಯಪುರ: ಕೆಲವೊಬ್ಬರಿಗೆ ಬಾಯಿಗೆ ಮತ್ತು ತಲೆಗೆ ಲಿಂಕ್ ಇರಲ್ಲ ಎನ್ನುವ ಮೂಲಕ ಶಾಸಕ ಯಶವಂತರಾಯಗೌಡ ಪಾಟೀಲ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಟಾಂಗ್ ನೀಡಿದ್ದಾರೆ.
ಉಡಾಫೆಯಾಗಿ ಮಾತನಾಡೋದು ಯತ್ನಾಳ ಅವರ ಸ್ವಭಾವ. ಅವರ ಟೀಕೆ ಟಿಪ್ಪಣೆಗಳಿಗೆ ಪ್ರತಿಕ್ರಿಯಿಸಬೇಕಿಲ್ಲ ಎಂದ ಅವರು, ‘ನಿಮ್ಮನ್ನೇ ನೀವು ನೋಡಿಕೊಳ್ಳಿ, ನೀವು ಕಡಿಮೆ ಮಾತನಾಡಿದ್ದರೆ ಎಲ್ಲಿರುತ್ತಿದ್ದೀರಿ, ಅತೀ ಹೆಚ್ಚು ಮಾತನಾಡಿದ್ದರಿಂದ ಎಲ್ಲಿದ್ದೀರಿ? ಎಂಬುದನ್ನು ಅವಲೋಕನ ಮಾಡಿಕೊಳ್ಳಿ ಎಂದು ಯತ್ನಾಳಗೆ ತಿವಿದಿದ್ದಾರೆ.
‘ಕಾಂಗ್ರೆಸ್‌ನ ಇಬ್ಬರು ನಾಯಕರು ಬಿಜೆಪಿಗೆ ಬರಲು ನಾಟಕ ಮಾಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಶಾಸಕ ಬಸವನಗೌಡ ಪಾಟೀಲ ಯತ್ನಾಳರ ಹೇಳಿಕೆಗೆ ಸಂಬಂಧಿಸಿದಂತೆ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ಯಾವುದೇ ಹೇಳಿಕೆ ಇರಲಿ ಅದು ಸತ್ಯಕ್ಕೆ ಸಮೀಪವಾಗಿರಬೇಕು. ಮಾತಿನಲ್ಲಿ ತೂಕ ಇರಬೇಕು ಎಂದರು.
ನನಗೂ ಮಾತನಾಡಲು ಬರುತ್ತೆ. ಹಾಗೆ ಮಾತಾಡೋದು ಸರಿಯಲ್ಲ, ಜನರು ನಮ್ಮ ನಡತೆಯನ್ನು ಗಮನಿಸುತ್ತಾರೆ. ಯಾರನ್ನೋ ತುಳಿಯುವ ಪ್ರಯತ್ನ ಮಾಡಬಾರದು. ಯಾರದೋ ಮಾತು ಕೇಳಿ ಮಾತನಾಡಬಾರದು. ಸ್ವಂತ ರಾಜಕಾರಣ ಮಾಡಬೇಕು. ಸುಮ್ಮನೆ ಊಹೆ ಕಟ್ಟಿಕೊಂಡು ರಾಜಕಾರಣ ಮಾಡಬಾರದು. ಚೀಪ್ ಪಾಲಿಟಿಕ್ಸ್, ಚೀಪ್ ಪಬ್ಲಿಸಿಟಿ ಇರಬಾರದು. ಇದೇ ಕಾರಣಕ್ಕೆ ವಿಜಯಪುರ ನಗರ ಜನತೆಗೆ ಎಂಥವರನ್ನು ಆರಿಸಿ ತಂದಿದ್ದೇವೆ ಎಂದು ಪಶ್ಚಾತಾಪ ಪಡುವಂತಾಗಿದೆ ಎಂದರು.
ನಾವೆಲ್ಲೂ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿಲ್ಲ. ಬಿಜೆಪಿಯವರು ನಮ್ಮನ್ನು ಸಂಪರ್ಕಿಸಿಲ್ಲ. ಕಾಂಗ್ರೆಸ್ ಬಿಡಲ್ಲ ಎಂದು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ. ದಿನ ನಿತ್ಯ ಹೀಗೆ ಮಾತಾಡೋರಿಗೆ ಉತ್ತರ ಕೊಡುತ್ತಾ ಹೋದರೆ ನನ್ನ ಗತಿ ಏನು? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸಿದ್ದಾಂತ ಒಳ್ಳೆಯದಾಗಿದೆ ಎಂದರು.
ಕನಮಡಿಯ ಧರೀದೇವರ ಮಂದಿರಕ್ಕೆ ನಾನು ಹೋದಾಗ ಶಿವಾನಂದ ಪಾಟೀಲ ಸಹ ಬಂದಿದ್ದರು. ಅಲ್ಲಿ ವೇದಿಕೆ ಮೇಲೆ ಒಟ್ಟಿಗೆ ಕುಳಿತು ಮಾತನಾಡಿದ್ದಿದೆ. ಅದು ನಮ್ಮ ವೈಯಕ್ತಿಕ. ನಮಗೂ ವೈಯಕ್ತಿಕ ಬದುಕಿದೆ. ಅಲ್ಲಿನ ಭಕ್ತರು ನಮಗೆ ಕರೆದಾಗ ಹೋಗಿದ್ದೇವೆ. ಶಿವಾನಂದ ಪಾಟೀಲರಿಗೆ ಆ ಕ್ಷೇತ್ರದ ಜನರ ಜೊತೆ ಭಾವನಾತ್ಮಕ ಸಂಬಂಧವಿದೆ. ನಮ್ಮ ಮೇಲಿನ ಪ್ರೀತಿ, ಅವರ ಮೇಲಿನ ಅಭಿಮಾನದಿಂದ ಸೇರಬೇಕಾಯಿತು. ಹಾಗಂತ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರಲ್ಲದೇ, ಇನ್ನು ಸ್ವಲ್ಪ ದಿನದಲ್ಲಿ ಚುನಾವಣೆ ಬರಲಿದೆ. ಯಾರು ಎಲ್ಲೆಲ್ಲಿ ನಿಲ್ತಾರೆ ನೋಡೋಣ. ಅಲ್ಲಿಂದ ರಾಜಕಾರಣ ಮಾಡೋಣ ಎಂದರು.