ಪಾಲಿಕೆ ಚುನಾವಣೆ: ಬಿಜೆಪಿಗೆ ಬಂಡಾಯದ ಬಿಸಿ, ಮುಖಂಡ ರವಿ ಬಗಲಿ ರಾಜೀನಾಮೆ ಘೋಷಣೆ !
ಸರಕಾರ್ ನ್ಯೂಸ್ ವಿಜಯಪುರ
ತೀವ್ರ ಕುತೂಹಲ ಕೆರಳಿಸಿರುವ ಮಹಾನಗರ ಪಾಲಿಕೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಮಾಪ್ತಿಗೊಳ್ಳುತ್ತಿದ್ದಂತೆ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿಕಾಂತ ಬಗಲಿ ಟಿಕೆಟ್ ವಂಚಿತರಾಗಿದ್ದು, ಬಂಡಾಯದ ಕಹಳೆ ಮೊಳಗಿಸಿದ್ದಾರೆ.
ವಾರ್ಡ್ ನಂ.22 ರ ಅಭ್ಯರ್ಥಿಯಾಗಿದ್ದ ರವಿಕಾಂತ ಬಗಲಿಗೆ ಟಿಕೆಟ್ ಕೈತಪ್ಪಿದೆ. ಆ ಹಿನ್ನೆಲೆ ಪಕ್ಷೇತರವಾಗಿ ಕಣಕ್ಕಿಳಿಯುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಪಕ್ಷ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಆದರೆ ಪಕ್ಷದಿಂದ ಯಾರಿಗೂ ಅನ್ಯಾಯ ಆಗಿಲ್ಲ. ಕೇವಲ ಒಬ್ಬ ವ್ಯಕ್ತಿಯಿಂದ ಬಹುತೇಕ ವಾರ್ಡ್ ಗಳಲ್ಲಿ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ ಎಂದು ಅವರು ತಿಳಿಸಿದ್ದಾರೆ.
ವಾರ್ಡ್ ನಂ. 23 ರ ವ್ಯಕ್ತಿಯನ್ನು ತಂದು ವಾರ್ಡ್ ನಂ.22 ಕ್ಕೆ ತಂದು ನಿಲ್ಲಿಸಿದ್ದಾರೆ. ಸದ್ಯ ವಾರ್ಡ್ ನಂ. 22 ರ ಬಿಜೆಪಿ ಅಭ್ಯರ್ಥಿ ಪ್ರೇಮಾನಂದ ಬಿರಾದಾರ ಅವರ
ಅಣ್ಣ ಜೆಡಿಎಸ್ ನಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಸದರಿ ಅಭ್ಯರ್ಥಿ ಪಕ್ಷಕ್ಕೆ ಶ್ರಮಿಸದೆ ಕಳೆದ ಬಾರಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದರು. ಆದರೆ ನಾನು ಹಲವು ವರ್ಷಗಳಿಂದ ಶ್ರಮಿಸುತ್ತಿದ್ದರೂ ಕಡೆಗಣಿಸಿ ಅಂಥವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ನನ್ನನ್ನು ಪಕ್ಷೇತರವಾಗಿ ಕಣಕ್ಕಿಳಿಸಿದ್ದಾರೆ. ಹೀಗಾಗಿ ಬಂಡಾಯ ಎನ್ನುವುದಕ್ಕಿಂತ ಪಕ್ಷೇತರವಾಗಿ ಕಣಕ್ಕಿಳಿಯಲಿದ್ದೇನೆ ಎಂದರು.
ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರ
ಹಿಟ್ಲರ್ ಸಂಸ್ಕೃತಿಯಿಂದಾಗಿ ನನಗೆ ಟಿಕೆಟ್ ತಪ್ಪಿದೆ. ಅಂಥವರ ವರ್ತನೆಗೆ ಬೇಸತ್ತು ಉಳಿದ ನಾಯಕರು ಸಹ ಸುಮ್ಮನಾಗಿದ್ದಾರೆ. ಅವರು ಎಂಎಲ್ ಸಿ ಚುನಾವಣೆ ಸಂದರ್ಭ ಜಿಲ್ಲೆಯ ಸ್ವಾಭಿಮಾನ ಇರಿಸಿಕೊಂಡು ಗೆದ್ದು ಬಂದಿದ್ದರು. ಇಂಥವರಿಗೆ ಪಕ್ಷ ನಿಷ್ಠೆ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಂದು ಅಂಥವರ ಮಾತು ಕೇಳಿಕೊಂಡೇ ನನಗೆ ಟಿಕೆಟ್ ತಪ್ಪಿಸಲಾಗಿದೆ. ನಾನೂ ಸಹ ಸ್ವಾಭಿಮಾನದಿಂದ ಗೆದ್ದು ಬರಲಿದ್ದೇನೆ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಉಲ್ಲೇಖಿಸಿ ಮಾತನಾಡಿದರು.
ಅಲ್ಲದೇ ತಕ್ಷಣದಿಂದಲೇ ಪಕ್ಷದ ವರಿಷ್ಠರಿಗೆ ರಾಜೀನಾಮೆ ಸಲ್ಲಿಸುವೆ ಎಂದರು.
ಮುಖಂಡರಾದ ಅಭಿಷೇಕ ಹಿರೇಮಠ, ದೇವೇಂದ್ರ ಪತ್ತಾರ, ಸಂಗಮೇಶ ಮೆಂಡೆಗಾರ, ಮಲ್ಲಿಕಾರ್ಜುನ ಕೆಂಗನಾಳ, ಅಕ್ಷಯಕುಮಾರ ಕಾಪ್ಸೆ, ಸಿದ್ದರಾಯಪ್ಪ ಕುಸೂರ, ಮನೋಜ ಕೋಟ್ಯಾಳಕರ, ಶ್ರೀಕಾಂತ ಮುತ್ತಗಿ ಮತ್ತಿತರರಿದ್ದರು.