ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ನದಾಫ್-ಪಿಂಜಾರ ಸಮುದಾಯ ಆಗ್ರಹ
ವಿಜಯಪುರ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ನದಾಫ್-ಪಿಂಜಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಲು ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ನದಾಫ್ ಆಗ್ರಹಿಸಿದರು.
ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿರುವ, ತೀರ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿಗೆ ಆಳುವ ವರ್ಗ ಗಮನ ಹರಿಸುತ್ತಿಲ್ಲ. ಹೀಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಅದಕ್ಕಾಗಿ ಫೆ. 10 ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯದಲ್ಲಿ 25 ರಿಂದ 30 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಕೃಷಿ ಹಾಗೂ ಇನ್ನಿತರರ ಚಟುವಟಿಕಗಳ ಜೊತೆ ಪಾರಂಪರಿಕವಾಗಿ ಬಂದ ಗಾದಿ ತಯಾರಿಕೆ ಕೆಲಸದಲ್ಲಿ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಆದರೆ ಈ ಕೆಲಸ ಕೆಲವೇ ತಿಂಗಳುಗಳಿಗೆ ಸೀಮಿತವಾಗಿದೆ. ಹೀಗಾಗಿ ಬಹಳಷ್ಟು ಕಾಲ ಕೆಲಸವಿಲ್ಲದೇ ಬಳಲುವಂತಾಗುತ್ತದೆ. ನಮ್ಮ ಜನಾಂಗದ ವೃತ್ತಿಯು ಹೆಚ್ಚಾಗಿ ಸಂಚಾರಿಯಾಗಿದ್ದು, ಹಲವು ಸಲ ವ್ಯಾಪಾರವಿಲ್ಲದ ಉಪವಾಸದ ಜೀವನವನ್ನು ಕೂಡಾ ನಡೆಸಬೇಕಾಗುತ್ತದೆ ಎಂಬ ಸಮಸ್ಯೆಯನ್ನು ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಬೇಕು. ಆ ಮೂಲಕ ಗಾದಿ ಮೊದಲಾದ ಪರಿಕರಗಳನ್ನು ನೇರವಾಗಿ ಮಾರಾಟ ಮಾಡುವ ಕೇಂದ್ರಗಳನ್ನು ತೆರೆಯಬಹುದಾಗಿದೆ. ಮೂಲ ಸೌಲಭ್ಯಗಳಾದ ಶಿಕ್ಷಣ, ಆರೋಗ್ಯ, ವಸತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ಈಗಾಗಲೇ ಆಂಧ್ರಪ್ರದೇಶ ಸರ್ಕಾರ ನಮ್ಮ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ನೀಡಿದಂತೆ ನಮ್ಮ ರಾಜ್ಯದಲ್ಲಿಯೂ ನಮ್ಮ ಜನಾಂಗದವರಿಗೂ ಅಭಿವೃದ್ಧಿ ನಿಗಮ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಎಂ.ಬಿ. ಬಡೇಘರ, ರಾಜ್ಯ ಪ್ರತಿನಿಧಿ ಅನ್ವರಹುಸೇನ್ ಅಂಗಡಿ, ಮೈನುದ್ದೀನ ನದಾಫ, ಹಾಜಿ ಪಿಂಜಾರ, ಜೆ.ಕೆ ನದಾಫ ಸುದ್ದಿಗೋಷ್ಠಿಯಲ್ಲಿದ್ದರು.