ಬೆಂಗಳೂರು

ಜಿಪಂ-ತಾಪಂ ಚುನಾವಣೆ ವಿಳಂಬ, ಹೈಕೋರ್ಟ್‌ ಅಸಮಾಧಾನ, ಸರ್ಕಾರಕ್ಕೆ ದಂಡ….

ಸರಕಾರ್‌ ನ್ಯೂಸ್‌ ಬೆಂಗಳೂರ

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ಹೊರಹಾಕಿರುವ ಹೈಕೋರ್ಟ್‌ ಸರ್ಕಾರಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈಗಾಗಲೇ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರಕ್ಕೆ ಆದೇಶ ನೀಡಲಾಗಿತ್ತು. ಆದರೆ, ವಿಳಂಬವಾಗಿದೆ. ಸರ್ಕಾರದ ಈ ಧೋರಣೆಗೆ ಹೈಕೋರ್ಟ್‌ ಅಸಮಾಧಾನ ಹೊರಹಾಕಿದೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದು ಪಡಿ ಅಧಿನಿಯ ರದ್ದುಪಡಿಸಬೇಕು ಹಾಗೂ ಕ್ಷೇತ್ರ ಪುನರ್‌ ವಿಂಗಡಣೆ ಪಟ್ಟಿ ನೀಡಲು ನಿರ್ದೇಶಿಸಬೇಕೆಂದು ಕೋರಿ ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಬುಧವಾರ ನಡೆಯಿತು. ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಖ ಎಸ್‌.ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಸೀಮಾ ನಿರ್ಣಯ ಆಯೋಗ ಪರ ಹಾಜರಾಗಿದ್ದ ಹಿರಿಯ ವಕೀಲರು “ಕ್ಷೇತ್ರ ಪುನರ್‌ ವಿಂಗಡಣೆಗೆ ಇನ್ನೂ 90 ದಿನಗಳ ಕಾಲಾವಕಾಶ ನೀಡಬೇಕೆಂದುʼʼ ಮನವಿ ಮಾಡಿದರು.

ಆದರೆ, ಇದನ್ನು ಒಪ್ಪದ ನ್ಯಾಯಪೀಠ “ಪದೇ ಪದೇ ಕಾಲಾವಕಾಶ ಕೇಳುತ್ತಿರುವ ನಿಮ್ಮ ಹಾಗೂ ಸರ್ಕಾರದ ನಡೆ ಸರಿಯಲ್ಲ” ಎಂದು ಅಸಮಾಧಾನ ಹೊರಹಾಕಿದರು.

ಅಲ್ಲದೇ, ಈಗಾಗಲೇ ಆರು ತಿಂಗಳು ಕಾಲಾವಕಾಶ ನೀಡಿದರೂ ಒಂದಿಂಚೂ ಪ್ರಗತಿಯಾಗಿಲ್ಲ. ಇದು ನ್ಯಾಯಾಲಯದ ಆದೇಶಗಳನ್ನು ನಿಷ್ಕ್ರೀಯಗೊಳಿಸುವ ಧೋರಣೆಯಿಂದ ಕೂಡಿದ ವರ್ತನೆ ಎಂದು ಬೇಸರಿಸಿದರು. ಮುಂದುವರಿದು 2023 ಫೆ. 1ರೊಳಗೆ ಕ್ಷೇತ್ರ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಗಡುವು ನೀಡಿ ಫೆ. 2ಕ್ಕೆ ವಿಚಾರಣೆ ಮುಂದೂಡಿತು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!