ಆನ್‌ಲೈನ್‌ನಲ್ಲಿ ಕಳೆದುಕೊಂಡ ಹಣ ವಾಪಸ್, ಸೈಬರ್ ಪೊಲೀಸ್‌ರ ಕಾರ್ಯಕ್ಕೆ ಶಿಕ್ಷಕ ಖುಷ್
ಸರಕಾರ್ ನ್ಯೂಸ್ ವಿಜಯಪುರ
ಆನ್‌ಲೈನ್‌ನಲ್ಲಿ ಕಳೆದುಕೊಂಡ ಹಣ ಸೈಬರ್ ಠಾಣೆ ಪೊಲೀಸ್‌ರ ಸಹಾಯದಿಂದ ಮರಳಿ ಕೈಸೇರಿದ್ದು ಇದೀಗ ಹಣ ಪಡೆದ ಶಿಕ್ಷಕನೋರ್ವ ಪೊಲೀಸರ ಕಾರ್ಯಕ್ಕೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾನೆ.
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಶಿಕ್ಷಕ ಆರ್.ಎಂ. ಜಮಾದಾರ ಹೋದ ಹಣ ಮರಳಿ ಪಡೆದ ಸಂತಸದಲ್ಲಿದ್ದಾರೆ. ಶುಕ್ರವಾರ ಎಸ್‌ಪಿ ಎಚ್.ಡಿ. ಆನಂದಕುಮಾರ ಅವರು ಹಣ ಮರು ಸಂದಾಯವಾದ ಖಾತ್ರಿ ಪತ್ರ ನೀಡುತ್ತಿದ್ದಂತೆ ಶಿಕ್ಷಕ ಮಂದಸ್ಮಿತರಾಗಿ ಪೊಲೀಸ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಕೃತಜ್ಞತೆ ಸಲ್ಲಿಸಿದರು.
ಏನಿದು ಪ್ರಕರಣ?
ಶಿಕ್ಷಕ ಆರ್.ಎಂ. ಜಮಾದಾರ ಡಿಸೆಂಬರ್ 10 ರಂದು ಆನ್‌ಲೈನ್ ವಂಚನೆಗೆ ಒಳಗಾಗಿದ್ದರು. ಆರ್‌ಟಿಒ ಇಲಾಖೆಗೆ ಸಂಬಂಧಿಸಿದಂತೆ ದಾಖಲೆಯೊಂದನ್ನು ಪ್ರೊಪೇಶನಲ್ ಕೋರಿಯರ್ ಮಾಡಿದ್ದರು. ನಿಗದಿತ ಅವಧಿಯಲ್ಲಿ ಕೋರಿಯರ್ ತಲುಪದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದ್ದರು. ಕರೆ ಕಡಿತಗೊಂಡ ಮೂರು ಸೆಕೆಂಡ್‌ನಲ್ಲಿಯೇ ಮರಳಿ ಕರೆ ಬಂದಿದ್ದು, ಕೋರಿಯರ್ ತಲುಪುವಲ್ಲಿ ತಾಂತ್ರಿಕ ತೊಂದರೆಯಾಗಿದ್ದು, 2 ರೂಪಾಯಿ ಪಾವತಿಸಲು ಲಿಂಕ್ ಕಳುಹಿಸಿದ್ದರು. ಆ ಪ್ರಕಾರ ಶಿಕ್ಷಕ ಜಮಾದಾರ ಲಿಂಕ್ ಓಪನ್ ಮಾಡಿ 2 ರೂಪಾಯಿ ಪಾವತಿಸುತ್ತಿದ್ದಂತೆ, ಖಾತೆಯಲ್ಲಿದ್ದ 89 ಸಾವಿರ ರೂಪಾಯಿ ವಂಚಿಸಿದ್ದರು. ಅದೇ ದಿನ ಶಿಕ್ಷಕ ಜಮಾದಾರ ಸೈಬರ್ ಠಾಣೆಗೆ ದೂರು ನೀಡಿದ್ದರು.
ಎಸ್‌ಪಿ ಎಚ್.ಡಿ. ಆನಂದಕುಮಾರ ಹಾಗೂ ಎಎಸ್‌ಪಿ ಶಂಕರ ಮಾರಿಹಾಳ ಅವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಬೆನ್ನಟ್ಟಿದ ಸಿಪಿಐ ರಮೇಶ ಅವಜಿ, ಡಬ್ಲುಪಿಸಿ ಎ.ಎಸ್. ಪಾಟೀಲ ಹಾಗೂ ಸಿಬ್ಬಂದಿ ಕುಮಾರ ರಾಠೋಡ ನೇತೃತ್ವದ ತಂಡ ಶಿಕ್ಷಕನಿಗೆ ಮರಳಿ ಹಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ನಾಲ್ಕೇ ದಿನದಲ್ಲಿ ಪ್ರಕರಣ ಭೇದಿಸಿದ್ದು, ಶಿಕ್ಷಕ ಫುಲ್ ಖುಷ್ ಆಗಿದ್ದಾರೆ.
(ಕ್ಷಣಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)