ರಂಗೇರಿದ ಪಾಲಿಕೆ ಚುನಾವಣೆ ಅಖಾಡ, ಬಂಡಾಯದ ಬಿಸಿ ತಗ್ಗಿಸಲು ಬಿಜೆಪಿ ಮಾಸ್ಟರ್ ಪ್ಲಾನ್ !
ಸರಕಾರ್ ನ್ಯೂಸ್ ವಿಜಯಪುರ
ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಮತ್ತು ಅಂತಿಮ ಘಳಿಗೆ ಆಗಮಿಸಿ ದರೂ ಬಿಜೆಪಿಯಲ್ಲಿ ಟಿಕೆಟ್ ದ್ವಂದ್ವ ಬಗೆ ಹರಿದಿಲ್ಲ !
ಚುನಾವಣೆ ಅಧಿಸೂಚನೆ ಪ್ರಕಟಗೊಂಡು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಾಗಿನಿಂದಲೂ ಅಭ್ಯರ್ಥಿ ಆಯ್ಕೆ ಮತ್ತಷ್ಟು ಕಗ್ಗಂಟಾಗುತ್ತಲೇ ಬಂದಿದ್ದು ಇದೀಗ ಅಂತಿಮ ದಿನವಾದ ಅ. 17 ರಂದು ಮಧ್ಯಾಹ್ನ 1 ಗಂಟೆ ಸಮೀಪಿಸಿದರೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿಲ್ಲ. ಆದರೆ ಕಾಂಗ್ರೆಸ್ ಬೆಳಗ್ಗೆಯೇ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದೆ.
ಬಂಡಾಯದ ಬಿಸಿ:
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಗಾಗಿ ರಾಜ್ಯ ನಾಯಕ ನಿರ್ಮಲಕುಮಾರ ಸುರಾನಾ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಬೇಕೆಂಬ ಅವರ ಉದ್ದೇಶ ಅಷ್ಟು ಸುರಳಿತವಾಗಿ ಈಡೇರಲು ಜಿಲ್ಲಾ ನಾಯಕರು ಬಿಡಲಿಲ್ಲ.
ಬಂಡಾಯದ ಬೇಗುದಿ ಹಾಗೂ ಬಣರಾಜಕೀಯದಿಂದಾಗಿ ಅಂತಿಮ ಕ್ಷಣದವರೆಗೂ ಅಭ್ಯರ್ಥಿ ಆಯ್ಕೆ ಕಸರತ್ತು ಅಂತ್ಯಗೊಳ್ಳಲಿಲ್ಲ.
ಮಾಸ್ಟರ್ ಪ್ಲಾನ್:
ಮೂಲಗಳ ಪ್ರಕಾರ ಭಾನುವಾರವೇ ಅಭ್ಯರ್ಥಿ ಪಟ್ಟಿ ಅಂತಿಮಗೊಂಡಿದ್ದು, ಅಂತಿಮ ಕ್ಷಣದವರೆಗೂ ಬಹಿರಂಗಪಡಿಸದಿರಲು ತೀರ್ಮಾನಿಸಲಾಗಿದೆ. ಕಾರಣ ಟಿಕೆಟ್ ವಂಚಿತರು ಬಂಡಾಯವಾಗಿ ಕಣ್ಣಕ್ಕಿಳಿಯದಂತೆ ನೋಡಿಕೊಳ್ಳುವುದು ಹಾಗೂ ಇತರೆ ಪಕ್ಷದತ್ತ ವಾಲದಂತೆ ನೋಡಿಕೊಳ್ಳಲು ವರಿಷ್ಟರೇ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆನ್ನಲಾಗಿದೆ. ನಾಮಪತ್ರ ಸಲ್ಲಿಕೆ ಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇರುವಾಗ ಒಟ್ಟಾಗಿ ಆಗಮಿಸಿ ನಾಮಪತ್ರ ಸಲ್ಲಿಸಲು ಯೋಚಿಸಲಾಗಿದೆ ಎಂದು ತಿಳಿದು ಬಂದಿದೆ. ಅಂದಹಾಗೆ ನಾಮಪತ್ರ ಸಲ್ಲಿಸಲು ಮಧ್ಯಾಹ್ನ 3 ರವರೆಗೆ ಸಮಯಾವಕಾಶ ಇದೆ.