ಗೊಲ್ಲ-ಕಾಡುಗೊಲ್ಲ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ವಿಚಾರ, ಸದನದಲ್ಲಿ ನಡೆದ ಬಿಸಿ ಬಿಸಿ ಚರ್ಚೆಯ ಸಾರ ಇಲ್ಲಿದೆ ನೋಡಿ….
ಸರಕಾರ್ ನ್ಯೂಸ್ ಬೆಳಗಾವಿ
ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಸರ್ಕಾರ ಈಗಾಗಲೇ ಕುಲ ಶಾಸ್ತ್ರೀಯ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈವರೆಗೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಏತನ್ಮಧ್ಯೆ ಗೊಲ್ಲ ಸಮುದಾಯವನ್ನೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂಬ ಕೂಗು ಬಲಗೊಂಡಿದ್ದು, ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಂಗಳವಾರ ಬೆಳಗಾವಿ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.
ಶಾಸಕ ಗೂಳಿಹಟ್ಟಿ ಶೇಖರ ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದಂತೆ ಸಿ.ಟಿ. ರವಿ ಕೂಡ ಧ್ವನಿ ಗೂಡಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಾತನಾಡಿ, ಈ ಬಗ್ಗೆ ಅನೇಕ ಬಾರಿ ಚರ್ಚೆಯಾಗಿದೆ. ಅನ್ನಪೂರ್ಣಮ್ಮನವರು ಸಹ ವರದಿ ನೀಡಿದ್ದಾರೆ. 2016ರಲ್ಲಿ ನಮ್ಮದೇ ಸರ್ಕಾರ ಶಿಫಾರಸ್ಸು ಮಾಡಿತು. ಈಗಾಗಲೇ 8 ವರ್ಷಗಳಾಗುತ್ತಾ ಬಂದಿದೆ. ಕೇಂದ್ರ ಸರ್ಕಾರ ಕ್ಲ್ಯಾರಿಫಿಕೇಶನ್ ಕೇಳುತ್ತಲೇ ಬಂದಿದೆ, ರಾಜ್ಯ ಸರ್ಕಾರ ನೀಡುತ್ತಲೇ ಬಂದಿದೆ. ಆದರೂ ವಿಳಂಬ ಸರಿಯಲ್ಲ. ಕೂಡಲೇ ಅವರನ್ನುಎಸ್ ಟಿಗೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದರು.
ಸಚಿವ ಮಾಧು ಸ್ವಾಮಿ ಪ್ರತಿಕ್ರಿಯಿಸುತ್ತಾ, 2010ರಲ್ಲಿ ಮೈಸೂರು ವಿವಿಯಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಾಗಿದೆ. 2014ರಲ್ಲಿ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಬಳಿಕ ಕೇಂದ್ರ ಸರ್ಕಾರ ಮರು ಪರಿಶೀಲನೆಗಾಗಿ ವಾಪಸ್ ಕಳುಹಿಸಿತು. ಆಚಾರ, ವಿಚಾರ, ಮದುವೆ, ಸಾವು ಮತ್ತಿತರ ಲಕ್ಷಣಗಳನ್ನು ಗಮನಿಸಿ ಬುಡಕಟ್ಟು ಸಂಸ್ಕೃತಿ ಹೊಂದಿಲ್ಲವೆಂದು ತಿಳಿಸಿತು. ಬಳಿಕ 2018ರಲ್ಲಿ ಮತ್ತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಳಿಕ 2021ರಲ್ಲಿ ಪತ್ರ ಬಂದಿದ್ದು, ಬುಡಕಟ್ಟು ಸಂಶೋಧನಾ ಕೇಂದ್ರದ ಮೂಲಕ ಮರುಪರಿಶೀಲನೆ ಮಾಡಿ ಕಳುಹಿಸಲು ತಿಳಿಸಲಾಗಿದೆ. ಆ 28/01/2022ರಂದು ಮತ್ತೆ ನೀಡಲಾಗಿದೆ. ಕೇಂದ್ರದ ನಾಯಕರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಾವು ಸಹ ಕೇಂದ್ರ ಸಚಿವ ಮುಂಡಾ ಅವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮುಂದುವರಿದು ಹೇಗಾದರೂ ಮಾರಿ ಫೆಬ್ರವರಿ ಒಳಗೆ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)