ಗ್ರಾಹಕರೇ ಹುಷಾರ್…! ಷೇರು ಲಾಭಾಂಶ ನಂಬಿ 1.53 ಕೋಟಿ ವಂಚನೆ, ಇಲ್ಲಿದೆ ನೋಡಿ ಮೋಸದ ಕಥೆ-ವ್ಯಥೆ…!
ಸರಕಾರ ನ್ಯೂಸ್ ಬೆಳಗಾವಿ
ಷೇರು ಮಾರುಕಟ್ಟೆಯ ಆಸೆ ತೋರಿಸಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಂಡು ಲಾಭಾಂಶದ ಹಣ ನೀಡದೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ನಗರದ ದುರ್ಗಾ ಮಹೇಶ ಕಲಹಾಳ ಎಂಬುವರಿಗೆ ಮೋಸವಾಗಿದ್ದು, ಈ ಬಗ್ಗೆ ಬೆಳಗಾವಿ ನಗರ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಸಂತ ಕೃಷ್ಣಾಜಿ ಮಹಾಜನ ಹಾಗೂ ರಕ್ಷಿತಾ ವಸಂತ ಮಹಾಜನ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ:
ಮೂಲತಃ ಖಾನಾಪುರ ತಾಲೂಕಿನ ನಾಗೋಡದ ನಿವಾಸಿ ವಸಂತ ಮಹಾಜನ ಎಚ್ ಡಿಎಫ್‌ಸಿ ಬ್ಯಾಂಕ್‌ನಲ್ಲಿ ದುರ್ಗಾ ಕಲಹಾಳಗೆ ಪರಿಚಯವಾಗಿದ್ದಾರೆ. ತಮ್ಮ ವಿಆರ್ ಎಂಟರ್ ಪ್ರೈಸಿಸ್ ಮತ್ತು ವಿ.ಆರ್. ಟ್ರೇಡಿಂಗ್ಸ್ ಷೇರು ಮಾರುಕಟ್ಟೆಯಲ್ಲಿ 2.50 ಲಕ್ಷ ರೂಪಾಯಿ ಹಣ ಹಾಕಿದರೆ ಪ್ರತಿ ತಿಂಗಳು ಶೇ. 4ರಷ್ಟು ಲಾಭಾಂಶ ಕೊಡುವುದಾಗಿ ಹೇಳಿದ್ದಾರೆ. ಆ ಪ್ರಕಾರ 2-3 ತಿಂಗಳು ಲಾಭಾಂಶದ ಹಣವೂ ಕೊಟ್ಟಿದ್ದಾರೆ. ಬಳಿಕ ದುರ್ಗಾ ಹಾಗೂ ಅವರ ಗಂಡನ ಹೆಸರಿನಲ್ಲಿ ಅವರ ತಾಯಿಯ ಹೆಸರಿನಲ್ಲಿ ಒಟ್ಟು 60 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಅಲ್ಲದೇ ಅಂಜನಾ ಕಂಬಳಿ, ರಾಜಾರಾಮ ಮಾನೆ, ಚೈತ್ರಾ ಸುರೇಶ ಜಂಜಿ, ಮಾಣಿಕ್ಯ ಶಾಹಾ ಪಾಟೀಲ, ಬಾಹುಬಲಿ ಚಂದ್ರಕಾಂತ ಪಾಟೀಲ, ಹೇಮಂತ ಮುತಗೇಕರ, ಸಂಜೀವ ಮುಂಡೋಳಿ, ಚೇತನ ಪುಂಡಿ ಇವರೆಲ್ಲರ ಕಡೆಯಿಂದ ರೂ.93,53,250 ನಗದು ಮತ್ತು ಬ್ಯಾಂಕ್ ಖಾತೆ ಮುಖಾಂತರ ವಸಂತ ಮಹಾಜನ ಮತ್ತು ಅವರ ಪತ್ನಿ ರಕ್ಷಿತಾ ಇವರ ಖಾತೆಗೆ ಹಾಕಿದ್ದಾರೆ. ಒಟ್ಟು 1,53,53,250 ರೂಪಾಯಿ ಹೂಡಿಕೆ ಮಾಡಿದ್ದಾರೆ. ಮೂಲ ಹೂಡಿಕೆ ಹಣ ಹಾಗೂ ಲಾಭಾಂಶದ ಹಣ ಮರಳಿ ನೀಡದೇ ಮೋಸ ಮಾಡಲಾಗಿದೆ ಎಂದು ದುರ್ಗಾ ದೂರಿನಲ್ಲಿ ತಿಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)