ಅಕ್ಷರಬಾವಿ ಪರಿಕಲ್ಪನೆ ಕೊಟ್ಟ ಶಿಕ್ಷಕ ಲಷ್ಕರಿಗೆ ರಾಜ್ಯ ಪ್ರಶಸ್ತಿ, ಅಷ್ಟಕ್ಕೂ ಇವರು ಮಾಡಿರುವ ಸಾಧನೆ ಏನು ಅಂತೀರಾ? ಇಲ್ಲಿದೆ ಡಿಟೇಲ್ಸ್
ಸರಕಾರ ನ್ಯೂಸ್ ಬೆಂಗಳೂರ
ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಕ್ಕಳ ಬರವಣಿಗೆಗಾಗಿ ಅಕ್ಷರ ಬಾವಿ ಎಂಬ ಪರಿಕಲ್ಪನೆ ಕೊಟ್ಟ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಇದೀಗ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೌದು, ಬಸವನಬಾಗೇವಾಡಿ ತಾಲೂಕಿನ ನಿಡಗುಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ-ಕಲಿ ಶಿಕ್ಷಕ ಎಂ.ಎಚ್. ಲಷ್ಕರಿ 2023-24ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು, ಬರದ ನಾಡಿನ ಶೈಕ್ಷಣಿಕ ಹಿರಿಮೆ ಹೆಚ್ಚಿಸಿದ್ದಾರೆ.
2007ರಲ್ಲಿ ನೇಮಕಾತಿಗೊಂಡ ಶಿಕ್ಷಕ ಎಂ.ಎಚ್. ಲಷ್ಕರಿ ಶೈಕ್ಷಣಿಕವಾಗಿ ಡಿಇಡಿ, ಎಂಎ ಮತ್ತು ಬಿಇಡಿ ಪೂರೈಸಿದ್ದಾರೆ. ನಲಿ-ಕಲಿ ಶಿಕ್ಷಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಸಾಧನೆ ಮಾಡಿದ್ದಾರೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಕ್ಕಳ ಬರವಣಿಗೆ ಅಭಿವೃದ್ಧಿಗಾಗಿ ಅಕ್ಷರ ಬಾವಿ ಎಂಬ ಪರಿಕಲ್ಪನೆ ಕೊಟ್ಟ ಇವರು, ನಲಿ ಕಲಿ ಮಕ್ಕಳಿಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಟೇಬಲ್ ಹಾಗೂ ಕುರ್ಚಿಗಳ ಬಳಕೆಯ ಮಾಡಿದರು. ಸ್ವಂತ ಖರ್ಚಿನಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಶಾಲಾ ಕೈತೋಟ, ಶಾಲಾ ಅವರದಲ್ಲಿ ಗಿಡಮರಗಳ ಬೆಳೆಸಿ ಹಚ್ಚು ಹಸಿರಿನ ವಾತಾವರಣ ನಿರ್ಮಾಣ ಮಾಡಿರುವುದು ಇವರ ಹೆಗ್ಗಳಿಕೆ.
ಇವರ ಕ್ರೀಯಾಶೀಲತೆ ಮತ್ತು ಉತ್ತಮ ಬೋಧನೆಯಿಂದಾಗಿ ನಿಡಗುಂದಿ ಶಾಲೆಗೆ ನೇಮಕವಾದಾಗ ಕೇವಲ 27 ಇದ್ದ ಶಾಲಾ ಮಕ್ಕಳ ಸಂಖ್ಯೆ ಇದೀಗ 107ಕ್ಕೆ ಏರಿಕೆಯಾಗಿದೆ. ಪಾಲಕರ ಆಕರ್ಷಣೆ ಹಾಗೂ ಸಹಭಾಗಿತ್ವದಡಿ ಕೈಗೊಂಡ ಕಾರ್ಯಗಳು ಮೆಚ್ಚುಗೆ ಗಳಿಸಿವೆ. ಕರೊನಾ ಕಾಲಕ್ಕಿಂತ ಮುಂಚೆಯೇ ಮಕ್ಕಳಿಗೆ ವಾಟ್ಸಪ್ ಗ್ರೂಪ್ ಗಳ ನಿರ್ಮಾಣ ಹಾಗೂ ನಿರಂತರ ಪಾಲಕರು ,ಮಕ್ಕಳೊಂದಿಗೆ ಸಂಪರ್ಕ ಹೊಂದಿದ್ದ ಶಿಕ್ಷಕ ಲಕ್ಷ್ಕರಿ ರಾಜ್ಯದಲ್ಲಿಯ ಮೊದಲ ಬಾರಿಗೆ ಶಾಲಾ ಅವಧಿಯ ನಂತರ ಮಕ್ಕಳ 5 ಗುಂಪುಗಳು ರಚನೆ ಹಾಗೂ ವಿವಿಧ ಸ್ಥಳಗಳಲ್ಲಿ ವಿದ್ಯಾರ್ಥಿ ನಾಯಕರ ಮಾರ್ಗದರ್ಶನದಲ್ಲಿ ಕಲಿಕೆಯ ಪುನರಾವರ್ತನೆಯಂಥ ವಿಧಾನಗಳ ಫಲವಾಗಿ ಎಲ್ಲರಿಗೂ ಎಚ್ಚು ಮೆಚ್ಚು ಆಗಿದ್ದಾರೆ.
ರಾಜ್ಯ ಹಂತದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ ಮಾಡಿರುವ ಇವರು, ವಿದ್ಯಾರ್ಥಿಗಳ ಕಲಿಕೆಗಾಗಿ ಹಾಗೂ ರಾಜ್ಯದ ಇತರೆ ಶಾಲೆಗಳ ಮಕ್ಕಳಿಗಾಗಿ , ಶಿಕ್ಷಕರಿಗಾಗಿ ‘ you tube channel’ (nalikali m h lashkari) ಸೃಷ್ಟಿ ಹಾಗೂ ಬಳಕೆ , ಶಾಲೆಗಾಗಿ ಸ್ವಂತ ಖರ್ಚಿನಲ್ಲಿ 40″ ನ TV (₹25000). , ಮಕ್ಕಳಿಗಾಗಿ ಕುರ್ಚಿಗಳು (₹8000) ಮಕ್ಕಳಿಗಾಗಿ Air cooler (₹4500) ,ಮಕ್ಕಳಿಗೆ ಸಮವಸ್ತ್ರ ಹೀಗೆ ವಿವಿಧ ಕೊಡುಗೆಗಳನ್ನು ನೀಡಿದ್ದಾರೆ.
ಈ ಶಾಲೆಯಲ್ಲಿ 80% ರಷ್ಟು ಲಂಬಾಣಿ ಸಮಾಜದ ಬಡತನ ರೇಖೆಯ ಆಸುಪಾಸಿನಲ್ಲಿರುವ ಜನರ ಮಕ್ಕಳು ,10% ಕುಂಚಿ ಕೊರವರ ಎಂಬ ಅಲೆಮಾರು ಜನಾಂಗದ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ( ತಾತ್ಕಾಲಿಕ ಮನೆಗಳಲ್ಲಿ ನೆಲೆಸಿರುವವರು) 10% ಮಕ್ಕಳು ಶಾಲೆಯಿಂದ ಒಂದು ಕಿ.ಮೀ. ಅಂತರವಿರುವ ನಿಡುಗುಂದಿ ನಗರದ ವಿವಿಧ ಭಾಗಗಳಿಂದ ಬರುವ ಮಕ್ಕಳು ಈ ಶಿಕ್ಷಕರ ಸೇವೆಯನ್ನು ಕೊಂಡಾಡುತ್ತಿದ್ದಾರೆ.
ಬಡತನ ರೇಖೆಗಿಂತ ಕೆಳಗಿದ್ದರೂ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯಿಂದ ಪ್ರೇರಣೆಗೊಂಡು ಶಾಲೆಗೆ ಸುಮಾರು 8 ಲಕ್ಷ ರೂಪಾಯಿವರೆಗೆ ಬೆಲೆಬಾಳುವ ಕೊಡುಗೆಗಳನ್ನು ನೀಡಿರುತ್ತಾರೆ. ಶಾಲೆಯು 10ಗುಂಟೆ ವಿಸ್ತೀರ್ಣದಲ್ಲಿಯೇ ಉತ್ತಮ ಆಟದ ಮೈದಾನ ,ಗಿಡಮರಗಳು ,ಶಾಲಾ ಕೈತೋಟ , ಆಕರ್ಷಕ ವರ್ಗ ಕೋಣೆಗಳು, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ,ಶುದ್ಧ ಕುಡಿಯುವ ನೀರಿನ ಘಟಕ ,ಮಕ್ಕಳು ಹಾಗೂ ಶಿಕ್ಷಕರು ಬಳಸಲು ಯೋಗ್ಯವಿರುವ ಸ್ವಚ್ಛ ಶೌಚಾಲಯ ,ಶಾಲಾ ಕಾಂಪೌಂಡ್ ಹಾಗೂ ಆಕರ್ಷಣೀಯ ಶಾಲಾ ಗೇಟ್ ಹಾಗೂ ಕಮಾನ್ ಗಳನ್ನು ಹೊಂದಿದೆ.
ಇವರ ಪರಿಶ್ರಮದ ಫಲವಾಗಿ ಕಿರಿಯ ಪ್ರಾಥಮಿಕ ಶಾಲೆ ಈಗ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿದೆ .ಕೇವಲ 3 ಶಿಕ್ಷಕರು,7 ತರಗತಿಗಳು,2 ಕೋಣೆಗಳು ಇದ್ದು,ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತಿದೆ. ರಾಜ್ಯದ ವಿವಿಧ ಹಂತದ ಅಧಿಕಾರಿಗಳು ,ಸಂಪನ್ಮೂಲ ವ್ಯಕ್ತಿಗಳು ,ವಿವಿಧ ಜಿಲ್ಲೆಯ ತಾಲೂಕಿನ ಶಿಕ್ಷಕರು ಶಾಲೆಗೆ ಭೇಟಿ ನೀಡಿರುತ್ತಾರೆ . ಶಾಲೆಯ ಬಲ ಭಾಗಕ್ಕೆ ಬೃಹತ್ ಕೃಷ್ಣ ಎಡದಂಡೆ ಕಾಲುವೆ ,ಶಾಲೆಯ ಎಡ ಭಾಗಕ್ಕೆ ಬೃಹತ್ ಕೆರೆ ,ಶಾಲೆಯ ಹಿಂಭಾಗದಲ್ಲಿ ಕೃಷ್ಣಾ ನದಿಯ ಒತ್ತು ,ಮಧ್ಯದಲ್ಲಿ ಶಾಲಾ ಕಟ್ಟಡವಿದೆ . ಪಾಲಕರ ಸಹಕಾರದಿಂದ ಶಾಲಾ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ . ಸ್ವಂತ ಖರ್ಚಿನಲ್ಲಿ ಕೃತಕ ಗುಬ್ಬಚ್ಚಿ ಗೂಡು ನಿರ್ಮಿಸಿ, 6 ಜೊತೆ ಗುಬ್ಬಚ್ಚಿಗಳು ಅದರಲ್ಲಿ ನೆಲೆಸಲು ಅವಕಾಶ ಮಾಡಲಾಗಿದೆ .
ಹಿಂದುಳಿದ ಜಿಲ್ಲೆಯಲ್ಲಿರುವ ನಿಡಗುಂದಿಯಂಥ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಕಲ್ಯಾಣಕ್ಕಾಗಿ ಇಷ್ಟೆಲ್ಲಾ ಶ್ರಮಿಸಿರುವ ಶಿಕ್ಷಕ ಲಷ್ಕರಿಗೆ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಯ ಗೌರವ ಮತ್ತು ಘನತೆ ಹೆಚ್ಚಿಸಿದೆ. ಅಲ್ಲವೇ?
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)