ಬಿಜೆಪಿ ಯೋಜನೆಗೆ ಆರಂಭದಲ್ಲೇ ವಿಘ್ನ, ತಳವಾರ ಸಮುದಾಯದಿಂದ ಆಕ್ರೋಶ…..ಜಾತಿ ಪ್ರಮಾಣ ಪತ್ರ ತಿರಸ್ಕಾರ
ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಪಷ್ಟ ನಿರ್ದೇಶನದ ನಡುವೆಯೂ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡದ ಅಧಿಕಾರಿಗಳ ವಿರುದ್ಧ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ತಳವಾರ ಮತ್ತು ಪರಿವಾರ ಸಮುದಾಯ ಕೆಂಡಾಮಂಡಲವಾಗಿದೆ.
ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದಗಳೆಂದು ಸರ್ಕಾರ ರಾಜ್ಯಪತ್ರ ಹೊರಡಿಸಿದ್ದರೂ ಅಧಿಕಾರಿಗಳು ಅನವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರದ ಹೊಣೆಗೇಡಿತನವೇ ಸಾಕ್ಷಿ ಎಂದು ಸಮುದಾಯದ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಶನಿವಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸರ್ಕಾರದ ಮಹತ್ವಾಕಾಂಕ್ಷಿ ʼಕಂದಾಯ ದಾಖಲೆ ಮನೆ ಬಾಗಿಲಿಗೆʼ ಕಾರ್ಯಕ್ರಮದ ವೇಳೆ ಮನೆಗೆ ಬಂದ ಪ್ರವರ್ಗ-1ರ ಜಾತ್ರಿ ಪ್ರಮಾಣ ಪತ್ರ ಹರಿದು ಹಾಕಿ ಪ್ರತಿಭಟನೆ ನಡೆಸಿದರು.
ಇಂಡಿ ತಾಲೂಕಿನ ಝಳಕಿ ಮತ್ತಿತರ ಹಳ್ಳಿಗಳಲ್ಲಿ ಮನೆಗೆ ಬಂದ ಕಂದಾಯ ಅಧಿಕಾರಿಗಳನ್ನು ಸಮಾಜದವರು ತರಾಟೆಗೆ ತೆಗೆದುಕೊಂಡುರ. ಬಸವನಬಾಗೇವಾಡಿ ಹಾಗೂ ಸಿಂದಗಿ ತಾಲೂಕಿನ ಗ್ರಾಮಗಳಲ್ಲೂ ಅಧಿಕಾರಿಗಳು ಇಂಥದ್ದೊಂದು ಮುಜುಗರ ಅನುಭವಿಸಬೇಕಾಯಿತು.
ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದರೂ ಅಧಿಕಾರಿಗಳು ಈವರೆಗೂ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಅಲ್ಲದೇ ರಾಜ್ಯ ಸರ್ಕಾರ ಕೂಡ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡುತ್ತಿಲ್ಲ. ಹೀಗಾಗಿ ಎಸ್‌ಟಿ ಪ್ರಮಾಣ ಪತ್ರ ಸಿಗುತ್ತಿಲ್ಲ. ನಮಗೆ ನ್ಯಾಯಯುತವಾಗಿ ಎಸ್‌ಟಿ ಪ್ರಮಾಣ ಪತ್ರ ನೀಡಬೇಕು. ಈ ಪ್ರವರ್ಗ -1ರ ಪ್ರಮಾಣ ಪತ್ರ ಬೇಕಾಗಿಲ್ಲ ಎಂದು ಪ್ರತಿಭಟನೆ ನಡೆಸಿದರಲ್ಲದೇ ಬಿಜೆಪಿ ಜನಪ್ರತಿನಿಧಿಗಳು ಕೂಡಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.